ರಾಜೀವ್ ಗಾಂಧಿ, ದೇವರಾಜ ಅರಸು ಅವರ ಆದರ್ಶಗಳನ್ನು ಯುವಜನತೆಗೆ ಪರಿಚಯಿಸಿ: ಸಿದ್ದರಾಮಯ್ಯ
ಸಿದ್ದರಾಮಯ್ಯ | Photo credit : @siddaramaiah
ಬೆಂಗಳೂರು : ಮುತ್ಸದ್ದಿ ನಾಯಕರಾದ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರು ಸಾಮಾಜಿಕ ನ್ಯಾಯ ಮತ್ತು ಸಮಸಮಾಜ ನಿರ್ಮಾಣಕ್ಕೆ ನೀಡಿದ ಕೊಡುಗೆಗಳು ಸ್ಮರಣೀಯ. ಇಬ್ಬರು ನಾಯಕರ ಜನ್ಮದಿನ ಒಂದೇ ದಿನವಾಗಿರುವುದು ವಿಶೇಷ. ಅವರ ಆದರ್ಶಗಳನ್ನು ಇಂದಿನ ಯುವಜನತೆಗೆ ಹೆಚ್ಚೆಚ್ಚು ಪರಿಚಯಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ ಅವರು ದೇಶದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನ, ದೂರಸಂಪರ್ಕ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ರಾಜೀವ್ ಗಾಂಧಿ ಅವರು ಯುವಜನರ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. 18 ವರ್ಷಕ್ಕೆ ಮತದಾನದ ಹಕ್ಕು ನೀಡುವ ಮೂಲಕ ಯುವಜನರನ್ನು ಪ್ರಜಾಪ್ರಭುತ್ವದ ಮುಖ್ಯವಾಹಿನಿಗೆ ತಂದರು. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗಗಳು, ಮಹಿಳೆಯರು, ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತರಿಗೆ ರಾಜಕೀಯ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳಿಗೆ ಕಾರಣರಾದರು ಎಂದು ಸಿದ್ದರಾಮಯ್ಯ ಹೇಳಿದರು.
ರಾಜೀವ್ ಗಾಂಧಿ ಅವರ ಹತ್ಯೆಯ ಸಂದರ್ಭದಲ್ಲಿ ತಾವು ಕೊಪ್ಪಳದಿಂದ ಲೋಕಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದನ್ನು ಸ್ಮರಿಸಿದ ಸಿದ್ದರಾಮಯ್ಯ, ಚುನಾವಣೆ ಮುಂದೂಡಿಕೆಯಾದ ಪರಿಣಾಮ ತಮ್ಮ ರಾಜಕೀಯ ಬದುಕಿನ ದಿಕ್ಕೇ ಬದಲಾಯಿತು ಎಂದು ಹೇಳಿದರು.
ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದ ಪರವಾಗಿ ಮಹತ್ವದ ಹೆಜ್ಜೆಗಳನ್ನು ಇಟ್ಟ ನಾಯಕರು. 1972ರಲ್ಲಿ ಮುಖ್ಯಮಂತ್ರಿಯಾಗಿದ್ದ ಅವರು ಹಾವನೂರು ಆಯೋಗ ರಚಿಸಿ, ಅದರ ವರದಿಯನ್ನು ಜಾರಿಗೊಳಿಸುವ ಮೂಲಕ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಅವಕಾಶ ಕಲ್ಪಿಸಿದರು ಎಂದರು.
ಭೂಸುಧಾರಣೆ ಕಾಯ್ದೆ, ಮಲ ಹೊರುವ ಪದ್ಧತಿ ನಿಷೇಧ, ಸಾಲ ವಿಮೋಚನೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದ ದೇವರಾಜ ಅರಸು ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಘನತೆಯ ಬದುಕು ಕಲ್ಪಿಸಲು ಶ್ರಮಿಸಿದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರನ್ನು ನೀಡುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದರು.
ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಸಮಸಮಾಜ ನಿರ್ಮಾಣಕ್ಕಾಗಿ ದುಡಿದ ರಾಜೀವ್ ಗಾಂಧಿ ಮತ್ತು ದೇವರಾಜ ಅರಸು ಅವರ ಚಿಂತನೆಗಳನ್ನು ಯುವಜನತೆಗೆ ತಲುಪಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರು ಮಾಡಬೇಕು ಎಂದು ಅವರು ಕರೆ ನೀಡಿದರು.