ಬಿ.ಕೆ. ಹರಿಪ್ರಸಾದ್ (Photo: X)

ಬೆಂಗಳೂರು: ಭಕ್ತಿಯ ಹೆಸರಿನಲ್ಲಿ ಮಸೀದಿ ಮುಂದೆ ಡಿಜೆ ಹಾಕಿಕೊಂಡು ಕುಣಿಯಬೇಕೆಂದು ನಮ್ಮ ಧರ್ಮ ಹೇಳಿಕೊಟ್ಟಿಲ್ಲ. ವಿನಾ ಕಾರಣ ಧರ್ಮವನ್ನು ರಾಜಕಾರಣಕ್ಕೆ ತಂದು ಮಕ್ಕಳನ್ನು ಜೈಲಿಗೆ ಕಳುಹಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಶನಿವಾರ ನಗರದ ಕೆಪಿಸಿಸಿ ಭವನದಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ನಿರ್ಮಾಣ ಶ್ರಮಿಕರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಪೂಜೆ ಪ್ರಾರ್ಥನೆ ಮಾಡದಿದ್ದರೂ ಮಸೀದಿ ಮುಂದೆ ಹೋದಾಗ ಗಣೇಶನ ಮೇಲೆ ಭಕ್ತಿ ಹೆಚ್ಚುತ್ತದೆ. ಮಸೀದಿ ಮುಂದೆ ಡಿಜೆ ಹಾಕಿಕೊಂಡು ಕುಣಿಯುವುದು ಇವರ ಭಕ್ತಿ. ಇದನ್ನು ಯಾವ ಧರ್ಮವೂ ಹೇಳಿಕೊಟ್ಟಿಲ್ಲ ಎಂದು ತಿಳಿಸಿದರು.

ಮಹಾಮಾನವ ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ದೇಶದಲ್ಲಿ ಧರ್ಮ ಆಧಾರಿತ ರಾಜಕಾರಣ ಮಾಡುತ್ತಿದ್ದಾರೆ. ನಾವು ನಿತ್ಯ ಪೂಜೆ, ಪ್ರಾರ್ಥನೆ ಮಾಡುತ್ತೇವೆ. ಅದನ್ನು ನಾವು ಮನೆಯಲ್ಲಿ ಮಾಡಿಕೊಳ್ಳುತ್ತೇವೆ. ಅದಕ್ಕೂ ಸರಕಾರಕ್ಕೂ ಏನು ಸಂಬಂಧ. ಧರ್ಮವನ್ನು ರಾಜಕಾರಣಕ್ಕೆ ತಂದು ಮಕ್ಕಳನ್ನು ಜೈಲಿಗೆ ಕಳುಹಿಸುತ್ತಿದ್ದಾರೆ. ಇವರು ಕಾರ್ಮಿಕರು, ಬಡವರು, ಮಹಿಳೆಯರ, ಸಮಾಜದ ಪರ ಹೋರಾಟ ಮಾಡಿ ಜೈಲಿಗೆ ಹೋಗಿಲ್ಲ ಎಂದ ಅವರು, ಬಸವಣ್ಣ ಅವರು ಹೇಳಿರುವ ಕಾಯಕವೇ ಕೈಲಾಸ ನಮ್ಮ ಧ್ಯೇಯ. ಅದು ನಮ್ಮ ಧರ್ಮ. ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸಿಕೊಂಡು ನಿಮ್ಮ ಹಿತ ಕಾಯುವವರನ್ನು ಅಧಿಕಾರಕ್ಕೆ ತನ್ನಿ. ನಾವು ಅಧಿಕಾರದಲ್ಲಿ ಇದ್ದಾಗ ಮಾಡಿದ ಕೆಲಸವನ್ನು ಈ ಮಹಾ ಮಾನವನಿಂದ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಆಸ್ಕರ್ ಫೆರ್ನಾಂಡಿಸ್ ಅವರು ಕೇಂದ್ರದಲ್ಲಿ ಸಚಿವರಾಗಿದ್ದಾಗ ಕಾರ್ಮಿಕರಿಗಾಗಿ ಅನೇಕ ಕ್ರಮ ಕೈಗೊಂಡಿದ್ದಾರೆ. ಜೀವನ ಮಾಡಲು ರಾಜಕಾರಣಕ್ಕೆ ಬರಬೇಡಿ, ಜನರ ಜೀವನ ಬದಲಿಸಲು ರಾಜಕೀಯಕ್ಕೆ ಬನ್ನಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ್ದಾರೆ. ಕಾರ್ಮಿಕರ ಜೀವನ ಬದಲಿಸಲು ನಾವು ಶ್ರಮಿಸಬೇಕು. ನಾವು ನೋಡಿದ ಕಾರ್ಮಿಕ ನಾಯಕರೇ ಬೇರೆ, ಈಗ ಇರುವ ನಾಯಕರೆ ಬೇರೆ. ಕಾರ್ಮಿಕ ನಾಯಕರಾಗಿದ್ದ ಎಂ.ಎಸ್.ಕೃಷ್ಣನ್, ಅನಂತ ಸುಬ್ಬರಾಯರು, ಸೂರ್ಯ ನಾರಾಯಣ್ ರಾವ್ ಅವರು ಸೇರಿದಂತೆ ಅನೇಕ ನಾಯಕರು ಸರಳ ಜೀವನ ಮಾಡಿದ್ದರು ಎಂದು ಅವರು ಹೇಳಿದರು.

ದೇಶ ನಿರ್ಮಾಣದಲ್ಲಿ ಕಾರ್ಮಿಕರು ರೈತರ ಕೊಡುಗೆ ಅಳತೆ ಮಾಡಲು ಅಸಾಧ್ಯ. ಯಾವುದೇ ದೇಶ ಪ್ರಗತಿ ಸಾಧಿಸಬೇಕಾದರೆ ಇವರ ಶ್ರಮ ಅಗತ್ಯ. ಕಾರ್ಮಿಕರ ಸಂಘಟನೆ ಸುಲಭವಲ್ಲ. ಹೊಟ್ಟೆಪಾಡಿಗೆ ಕಾರ್ಮಿಕರಗಿದ್ದೇವೆ ಎಂಬ ತಪ್ಪು ಕಲ್ಪನೆ ಬಿಡಿ. ಕಾರ್ಮಿಕರು, ರೈತರು ರಾಷ್ಟ್ರ ಸೇವೆ, ಅಭಿವೃದ್ಧಿಗೆ ನಿರಂತರವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಭಾರತ ಇಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ನಿಮ್ಮ ಶ್ರಮಕ್ಕೆ ಗೌರವ ಸಿಗಬೇಕು. ನೀವು ಕೀಳರಿಮೆ ಬಿಡಬೇಕು. ದೇಶಕ್ಕಾಗಿ ದುಡಿಯುವವರು. ಕಟ್ಟಡ ಕಾರ್ಮಿಕರು, ಮಳೆ ಗಾಳಿ ಬಿಸಿಲಲ್ಲಿ ಕೆಲಸ ಮಾಡಬೇಕು. ಇದು ಸುಲಭದ ಕೆಲಸವಲ್ಲ. ನೀವು ಕೆಲಸ ಮಾಡಿದರೆ ಸರ್ಕಾರಗಳ ಖಜಾನೆ ತುಂಬುವುದು. ನೀವು ಆರಿಸಿ ಕಳಿಸುವ ನಾಯಕರು ಸರಕಾರದ ಖಜಾನೆ ಹಣವನ್ನು ನಿಮ್ಮ ಕಲ್ಯಾಣಕ್ಕೆ ಬಳಸುವಂತೆ ಮಾಡಬೇಕು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor