Bengaluru | ನೆರೆಯ ಮನೆಯ 13 ವರ್ಷದ ಮಗನ ಅಪಹರಣ, ಹತ್ಯೆ; ಕುಟುಂಬದ 3 ಕೋಟಿ ರೂ. ಸಾಲ ತೀರಿಸಲು UK ಯಿಂದ ಮರಳಿದ್ದ MTech ಪದವೀಧರ ಮಾಡಿದ ಪ್ಲಾನ್ ಹೇಗಿತ್ತು?
ಆರೋಪಿ ವಾಲಾ ಭಾಸ್ಕರ್ ರೆಡ್ಡಿ
ಬೆಂಗಳೂರು: ಕುಟುಂಬದ 3 ಕೋಟಿ ರೂ. ಸಾಲ ತೀರಿಸಲು ಈ ಹಿಂದೆ ತಮ್ಮ ನೆರೆಯವರಾಗಿದ್ದ ವ್ಯಕ್ತಿಯೊಬ್ಬರ 13 ವರ್ಷದ ಪುತ್ರನನ್ನು ಅಪಹರಿಸಿ, ಆತನ ತಂದೆಯಿಂದ 1 ಕೋಟಿ ರೂ. ಸುಲಿಗೆ ಮಾಡಲು ಸಂಚು ರೂಪಿಸಿ ಹತ್ಯೆ ಮಾಡಿದ ಆರೋಪದ ಮೇಲೆ ಯುನೈಟೆಡ್ ಕಿಂಗ್‌ಡಮ್ (UK) ಯಿಂದ ಮರಳಿದ್ದ MTech ಪದವೀಧರ ವಾಲಾ ಭಾಸ್ಕರ್ ರೆಡ್ಡಿಯನ್ನು ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಹತ್ಯೆಗೆ ಸಹಕರಿಸಿದ್ದ ಎಡುಕೊಂಡಲು ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮೂಲಸೌಕರ್ಯ ಕಂಪೆನಿಯೊಂದರಲ್ಲಿ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದ ಭಾಸ್ಕರ್ ರೆಡ್ಡಿ, ಪ್ರಜ್ವಲ್ ನ ತಂದೆ ಮನೋಹರ್ ಅವರಿಂದ ಹಣ ಸುಲಿಗೆ ಮಾಡುವ ಉದ್ದೇಶದಿಂದ ಬಾಲಕನನ್ನು ಗುರಿಯಾಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
8ನೇ ತರಗತಿ ವಿದ್ಯಾರ್ಥಿ ಎಂ. ಪ್ರಜ್ವಲ್ ಅವರ ಕುಟುಂಬ ಮತ್ತು ರೆಡ್ಡಿ ಕುಟುಂಬ ಈ ಹಿಂದೆ ಯಲಹಂಕದ ಒಂದೇ ಪ್ರದೇಶದಲ್ಲಿ ನೆರೆಹೊರೆಯವರಾಗಿದ್ದರು. ಬಳಿಕ ಪ್ರಜ್ವಲ್ ಕುಟುಂಬ ಅದೇ ಪ್ರದೇಶದ ಮತ್ತೊಂದು ಬೀದಿಗೆ ಸ್ಥಳಾಂತರಗೊಂಡಿತ್ತು.
ಬುಧವಾರ ಭಾಸ್ಕರ್ ರೆಡ್ಡಿ ತನ್ನ SUV ಕಾರಿನಲ್ಲಿ ಪ್ರಜ್ವಲ್ ನನ್ನು ಆತನ ಮನೆಯ ಸಮೀಪದಿಂದ ಕರೆದೊಯ್ದಿದ್ದ. ಪಟಾಕಿಗಳನ್ನು ಖರೀದಿಸುವುದಾಗಿ ಹೇಳಿದ್ದಲ್ಲದೆ, ಕಾರು ಚಾಲನೆ ಕಲಿಸುವುದಾಗಿಯೂ ಬಾಲಕನಿಗೆ ಆಮಿಷವೊಡ್ಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಭಾಸ್ಕರ್ ರೆಡ್ಡಿ ಮತ್ತು ಎಡುಕೊಂಡಲು ಪ್ರಜ್ವಲ್ ನನ್ನು ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದರು. ಅಲ್ಲಿ ಬಾಲಕನನ್ನು ತಮ್ಮ ವಶದಲ್ಲಿಟ್ಟುಕೊಂಡು ವೀಡಿಯೋ ಚಿತ್ರೀಕರಿಸಿದರು. ಬಳಿಕ ಮರದ ದಿಮ್ಮಿಯಿಂದ ಆತನ ತಲೆಗೆ ಹೊಡೆದು ಪ್ರಜ್ಞೆ ತಪ್ಪಿಸಿದರು.
ನಂತರ ಪ್ರಜ್ವಲ್ ನನ್ನು ಮತ್ತೊಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕಾಂಪೌಂಡ್ ಗೋಡೆಯ ಮೇಲೆ ನಿಂತು ಆತನ ಮೇಲೆ ಇಟ್ಟಿಗೆಗಳನ್ನು ಎಸೆದು ಬರ್ಬರವಾಗಿ ಹತ್ಯೆ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೂ ಮುನ್ನ ಚಿತ್ರೀಕರಿಸಿದ್ದ ಬಾಲಕನ ವೀಡಿಯೋವನ್ನು ಆತನ ಕುಟುಂಬಕ್ಕೆ ಕಳುಹಿಸಿ ಹಣಕ್ಕೆ ಬೇಡಿಕೆ ಇಡುವುದು ಆರೋಪಿಗಳ ಯೋಜನೆಯಾಗಿತ್ತು. ಈ ಮೂಲಕ 1 ಕೋಟಿ ರೂ. ಸುಲಿಗೆ ಮಾಡಲು ಅವರು ಉದ್ದೇಶಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಎಡುಕೊಂಡಲು ಖಾಸಗಿ ಶಾಲೆಯೊಂದರ ಬಸ್ ಕ್ಲೀನರ್ ಆಗಿದ್ದು, ಹಣದ ಆಮಿಷಕ್ಕೆ ಒಳಗಾಗಿ ಕೃತ್ಯಕ್ಕೆ ಒಪ್ಪಿಕೊಂಡಿದ್ದ. ಬಾಲಕ ಮೃತಪಟ್ಟ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಭಾಸ್ಕರ್ ರೆಡ್ಡಿ ಮೃತದೇಹವನ್ನು ಆಂಧ್ರಪ್ರದೇಶದ ನೆಲ್ಲೂರಿಗೆ ಕೊಂಡೊಯ್ದು ಅಲ್ಲಿ ವಿಲೇವಾರಿ ಮಾಡಲು ನಿರ್ಧರಿಸಿದ್ದ. ಸ್ಥಳದಲ್ಲಿ ಸಿಕ್ಕ ಹಳೆಯ ಹಾಗೂ ಹರಿದ ಹಾಸಿಗೆಯಲ್ಲಿ ಮೃತದೇಹವನ್ನು ಸುತ್ತಿ SUVಯ ಡಿಕ್ಕಿಯಲ್ಲಿ ಇರಿಸಿಕೊಂಡಿದ್ದ.
ಆದರೆ, ಮೃತದೇಹ ಸಾಗಿಸುವಾಗಲೇ ಆತನ ಯೋಜನೆ ವಿಫಲವಾಯಿತು. ಮದ್ಯದ ಅಮಲಿನಲ್ಲಿ SUV ಚಲಾಯಿಸುತ್ತಿದ್ದ ಭಾಸ್ಕರ್ ರೆಡ್ಡಿ ವಿದ್ಯುತ್ ಕಂಬಕ್ಕೆ ವಾಹನವನ್ನು ಢಿಕ್ಕಿ ಹೊಡೆದಿದ್ದಾನೆ. ಬಳಿಕವೂ ವಾಹನ ಚಲಾಯಿಸಿಕೊಂಡು ಹೋಗಿ, ಚಿಕ್ಕಜಾಲ ಬಳಿಯ ಅಪಾರ್ಟ್‌ಮೆಂಟ್ ಸಂಕೀರ್ಣದ ಹೊರಗೆ ನಿಲ್ಲಿಸಿದ್ದ ಎರಡು ಕಾರುಗಳಿಗೆ ಢಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಢಿಕ್ಕಿಯ ಶಬ್ದ ಕೇಳಿ ಭದ್ರತಾ ಸಿಬ್ಬಂದಿ ಹಾಗೂ ನಿವಾಸಿಗಳು ಸ್ಥಳಕ್ಕೆ ಧಾವಿಸಿ ರೆಡ್ಡಿಯನ್ನು ಹಿಡಿದುಕೊಂಡರು. ಆತ ಮದ್ಯ ಸೇವಿಸಿದ್ದಾನೆಂದು ಶಂಕಿಸಿ ವಾಹನವನ್ನು ಪರಿಶೀಲಿಸಿದಾಗ, SUVಯ ಡಿಕ್ಕಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಯಿತು.
ಕುಟುಂಬಗಳ ನಡುವೆ ದ್ವೇಷವಿರಲಿಲ್ಲ:
“ಪ್ರಾಥಮಿಕ ತನಿಖೆಯಲ್ಲಿ ಬಾಲಕನ ತಂದೆ ಮನೋಹರ್ ಮತ್ತು ಭಾಸ್ಕರ್ ರೆಡ್ಡಿ ಕೆಲವು ವರ್ಷಗಳಿಂದ ನೆರೆಹೊರೆಯವರಾಗಿದ್ದರು ಎಂದು ತಿಳಿದುಬಂದಿದೆ. ಎರಡೂ ಕುಟುಂಬಗಳ ನಡುವೆ ಯಾವುದೇ ದ್ವೇಷವಿರಲಿಲ್ಲ. ಅವರಿಬ್ಬರೂ ವ್ಯಾಪಾರ ಪ್ರತಿಸ್ಪರ್ಧಿಗಳೂ ಅಲ್ಲ. ಬಾಲಕನಿಗೆ ಕಾರುಗಳ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಆರೋಪಿಗಳು ಇದನ್ನು ಬಳಸಿಕೊಂಡು ಆತನನ್ನು ಆಕರ್ಷಿಸಿದ್ದರು,” ಎಂದು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಜಿ.ಕೆ. ಮಿಥುನ್ ಕುಮಾರ್ ತಿಳಿಸಿದ್ದಾರೆ.
ಪ್ರಜ್ವಲ್‌ನನ್ನು ಅಪಹರಿಸಿ ಹತ್ಯೆಗೈದಿರುವುದಕ್ಕೆ ಬೇರೆ ಯಾವುದೇ ಕಾರಣಗಳಿವೆಯೇ ಎಂಬುದನ್ನು ಪತ್ತೆಹಚ್ಚಲು ಭಾಸ್ಕರ್ ರೆಡ್ಡಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಎಡುಕೊಂಡಲುಗಾಗಿ ಶೋಧ ಮುಂದುವರಿದಿದೆ.