ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಾತಿ: ಮುಂಗಡ ಶುಲ್ಕ ಪಾವತಿಗೆ ನ.21ರವರೆಗೆ ಅವಧಿ ವಿಸ್ತರಿಸಿದ ಕೆಇಎ
ಬೆಂಗಳೂರು : ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‍ಗಳ ಪ್ರವೇಶಾತಿಗೆ ಸಂಬಂಧಿಸಿದ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಮುಂಗಡ ಶುಲ್ಕ ಪಾವತಿಸಲು ನ.21ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಗುರುವಾರ ಈ ಸಂಬಂಧ ಪ್ರಕಟನೆ ಹೊರಡಿಸಿರುವ ಅವರು, ಮುಂಗಡ ಹಣ ಪಾವತಿಸಿದ ಅಭ್ಯರ್ಥಿಗಳು ನ.23ರ ಬೆಳಗ್ಗೆ 11 ಗಂಟೆಯವರೆಗೆ ತಮ್ಮ ಆಯ್ಕೆಗಳನ್ನು ದಾಖಲಿಸಬಹುದಾಗಿದೆ. ಸೀಟು ಹಂಚಿಕೆಯ ಫಲಿತಾಂಶ ಹಾಗೂ ಮುಂದಿನ ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಶಾಲೆಗಳಲ್ಲಿನ ಉಳಿಕೆ ಮೂಲ ವೃಂದದ ಹುದ್ದೆಗಳ ನೇಮಕಾತಿಗಾಗಿ ನ.22ರಂದು ಲಿಖಿತ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳುವಂತೆ ಪ್ರಕಟನೆಯಲ್ಲಿ ಸೂಚಿಸಲಾಗಿದೆ.