ರಾಜ್ಯದಲ್ಲಿ ಪರ್ಯಾಯ ಇಂಧನಗಳ ಉತ್ಪಾದನೆಗೆ ಆದ್ಯತೆ: ಎಸ್.ಈ. ಸುಧೀಂದ್ರ
ಬೆಂಗಳೂರು: ದೇಶದಲ್ಲಿ ಇಂಧನ ಬಿಕ್ಕಟ್ಟು ಉಂಟಾಗಿದ್ದು, ಸ್ಥಳೀಯ ಮಟ್ಟದಲ್ಲೇ ಬಯೋಗ್ಯಾಸ್, ಬಯೋಮಿಥೇನ್, ಬಯೋಕೋಲ್, ಬಯೋಚಾರ್, ಪೆಲ್ಲೆಟ್, ಬ್ರಿಕೆಟ್ ಮುಂತಾದ ಪರ್ಯಾಯ ಇಂಧನಗಳ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಹೊಸ ಜೈವಿಕ ಇಂಧನ ಕ್ರಾಂತಿಯನ್ನು ಸೃಷ್ಟಿ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ. ಸುಧೀಂದ್ರ ಹೇಳಿದ್ದಾರೆ.
ಮಂಗಳವಾರ ಪ್ರಕಟನೆ ಹೊರಡಿಸಿರುವ ಅವರು, ರಾಜ್ಯದಲ್ಲಿ ಸೌರಶಕ್ತಿ ಮತ್ತು ಪವನಶಕ್ತಿಯನ್ನು ಸಂಯೋಜಿಸಿ ಹೈಬ್ರಡ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗಳೂ ರೂಪುಗೊಳ್ಳುತ್ತಿವೆ. ಈ ಹೊಸ ಜೈವಿಕ ಇಂಧನ ನೀತಿಯ ಪ್ರಮುಖ ಉದ್ದೇಶ ವಿಕೇಂದ್ರೀಕೃತ ಜೈವಿಕ ಮತ್ತು ಹಸಿರು ಇಂಧನ ಉತ್ಪಾದನೆಗೆ ಉತ್ತೇಜನ ನೀಡುವುದಾಗಿದೆ. ಇದರಿಂದ ರಾಜ್ಯಕ್ಕೆ 33 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆ ಬರಲಿದೆ ಎಂದಿದ್ದಾರೆ.
ಈ ಯೋಜನೆಗಳ ಮೂಲಕ ಕಚ್ಚಾತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ, ಪರಿಸರ ಸಂರಕ್ಷಣೆ, ಗ್ರಾಮೀಣ ಉದ್ಯೋಗ ಸೃಷ್ಟಿ ಹಾಗೂ ಸ್ಥಳೀಯ ಆರ್ಥಿಕ ಅಭಿವೃದ್ಧಿಗೂ ಉತ್ತೇಜನ ಸಿಗಲಿದೆ. ರೈತರಿಗೆ ಕೃಷಿ ತ್ಯಾಜ್ಯದಿಂದ ಹೆಚ್ಚುವರಿ ಆದಾಯ ದೊರೆಯುವ ಸಾಧ್ಯತೆಯೂ ಇದೆ. ಹಸಿರು ಇಂಧನ ಬಳಕೆ ಹೆಚ್ಚಾದಂತೆ ಕಾರ್ಬನ್ ತ್ಯಾಜ್ಯ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.