Basavakalyan | ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್ ಖಂಡಿಸಿ ಮನವಿ

ರಾಷ್ಟ್ರಪತಿಗಳು ಮಧ್ಯಪ್ರವೇಶಿಸಲು ಆಗ್ರಹ

Update: 2026-07-21 17:25 IST

ಬಸವಕಲ್ಯಾಣ: ಸೋನಮ್ ವಾಂಗ್ಚುಕ್ ಅವರ ಬಲವಂತದ ಬಂಧನ ಹಾಗೂ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್‌ನ್ನು ಖಂಡಿಸಿ, ವಿದ್ಯಾರ್ಥಿಗಳು ಮತ್ತು ಪೋಷಕರ ಬೇಡಿಕೆಗಳನ್ನು ಈಡೇರಿಸಲು ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಹಾಗೂ ಗ್ರಾಮ ಕ್ರಾಂತಿ ಸೇನೆ ವತಿಯಿಂದ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆ ಸುಸೂತ್ರವಾಗಿ ಕಾರ್ಯನಿರ್ವಹಿಸಲು ಚುನಾವಣೆಗಳು ಮತ್ತು ಸಾಂಸ್ಥಿಕ ವ್ಯವಸ್ಥೆಗಳ ಜೊತೆಗೆ ಜನರ ಭಾಗವಹಿಸುವಿಕೆಯೂ ಅತ್ಯಂತ ಮುಖ್ಯವಾಗಿದೆ. ಪ್ರತಿಭಟನೆ ಕೂಡ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಂದ ಈಗಾಗಲೇ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ನಿರಂತರವಾಗಿ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಪರವಾಗಿ ಹಾಗೂ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ದೆಹಲಿಯ ಜಂತರ್-ಮಂತರ್ ಸೇರಿದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ಬೆಳವಣಿಗೆಗಳಿಗೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ದೇಶಾದ್ಯಂತ ಆಗ್ರಹ ವ್ಯಕ್ತವಾಗಿದ್ದರೂ, ಕೇಂದ್ರ ಸರ್ಕಾರ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.

ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಬಲವಂತವಾಗಿ ಬಂಧಿಸಿರುವುದು ಮತ್ತು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಹಾಗೂ ಟಿಯರ್ ಗ್ಯಾಸ್ ಪ್ರಯೋಗಿಸಿರುವುದು ಅಮಾನವೀಯ ಹಾಗೂ ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಸಂಘಟನೆ ಖಂಡಿಸಿದೆ.

ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ತಕ್ಷಣ ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಸಂದೀಪ್ ಮುಕಿಂದೆ, ರವಿ ಕೊಳಕುರ್, ಆಕಾಶ್ ಖಂಡಾಳೆ, ಪ್ರಫೂಲ್ ಗಾಯಕ್ವಾಡ್, ಮಾಂತೇಶ್ ಗೌರಕರ್, ಸುರೇಶ್ ಮೊರೆ, ನಿತ್ಯಾನಂದ್ ಮಂಠಾಳಕರ್ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News