ಬೀದರ್ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ರೈತ ಸಂಘ ಆಗ್ರಹ

ರೈತರ ಹುತಾತ್ಮ ದಿನಾಚರಣೆ ದಿನದ ನಿಮಿತ್ಯ ರೈತರ ಪ್ರತಿಭಟನೆ

Update: 2026-07-21 19:44 IST

ಬೀದರ್: ರೈತರ ಹುತಾತ್ಮ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ಬೀದರ್ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡುವಂತೆ ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಮಂತ್ ಬಿರಾದಾರ್, ಡಾ. ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಸಂದೇಶದಂತೆ ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದು, ಅದರ ಸ್ಮರಣಾರ್ಥವಾಗಿ ಪ್ರತಿವರ್ಷ ಜುಲೈ 21ರಂದು ರೈತರ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ಬೀದರ್ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಬೆಳೆ ಹಾನಿಗೊಳಗಾದ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಹಾಗೂ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಇದಲ್ಲದೆ, ಬೆಳೆ ವಿಮೆ ಪರಿಹಾರವನ್ನು ಅರ್ಹ ರೈತರಿಗೆ ಶೀಘ್ರ ಬಿಡುಗಡೆ ಮಾಡಬೇಕು. ಕಬ್ಬು ಬೆಳೆಗಾರರಿಗೆ ಬಾಕಿ ಇರುವ ಸುಮಾರು 10 ಕೋಟಿ ರೂ. ಹಣವನ್ನು ತಕ್ಷಣ ಪಾವತಿಸಬೇಕು. ಬಿಎಸ್ಎಸ್‌ಕೆ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆ ನಿರಂತರ ಏಳು ಗಂಟೆಗಳ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು ಹಾಗೂ ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಗೌರವಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಸ್ವಾಮಿ ಸಿರ್ಸಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಹಾನಂದಾ ದೇಶಮುಖ, ರಾಜ್ಯ ಪ್ರತಿನಿಧಿ ಶೇಷರಾವ್ ಕಣಜಿ, ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್ ಜಮಖಂಡ, ಹಸಿರು ಸೇನೆ ಸಂಚಾಲಕ ನೀಲಕಂಠ್ ಬುಯ್ಯಾ, ಜಿಲ್ಲಾ ಉಪಾಧ್ಯಕ್ಷ ಶಂಕರೆಪ್ಪ ಪಾರಾ, ಸಿದ್ದಣ್ಣ ಭೂಶೆಟ್ಟಿ, ಬಾಬುರಾವ್ ಜೋಳದಬಕಾ, ನಾಗಯ್ಯ ಸ್ವಾಮಿ, ಪ್ರವೀಣ ಕುಲಕರ್ಣಿ, ಪ್ರಕಾಶ್ ಬಾವಗೆ, ಸುಭಾಷ್ ರಗಟೆ, ಸತೀಶ್ ನನ್ನೂರೆ ಹಾಗೂ ಅನೀಲಕುಮಾರ್ ಕಣಜಿ, ವೀರಶೆಟ್ಟಿ ಬಿರಾದಾರ್, ಮಲ್ಲಿಕಾರ್ಜುನ್ ಚಕ್ಕಿ, ರಾಜಕುಮಾರ್ ಪಾಟೀಲ್, ವೆಂಕಟರಾವ್ ವಲ್ಲಪೆ ಹಾಗೂ ಬಸಪ್ಪ ಆಲೂರೆ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News