ಭಾಲ್ಕಿ: ಮಕ್ಕಳು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ದೌರ್ಜನ್ಯಕ್ಕೆ ಒಳಗಾದಾಗ ಭಯಪಡದೆ ಧೈರ್ಯವಾಗಿ ಧ್ವನಿ ಎತ್ತಬೇಕು ಎಂದು ನ್ಯಾಯವಾದಿ ಸಂದೀಪ್ ತೆಲಗಾಂವಕರ್ ಹೇಳಿದರು.

ತಾಲೂಕಿನ ಡೋಣಗಾಪುರ ಗ್ರಾಮದ ರಾಚೋಟಿಶಿವಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಾಲೆಯ ಸಹಯೋಗದಲ್ಲಿ ಬುಧವಾರ ‘ಜಾಗೃತ ಬಾಲ್ಯ–ಸಶಕ್ತ ಭಾರತ, ನನ್ನ ಬಾಲ್ಯ–ನನ್ನ ಹಕ್ಕು’ ಎಂಬ ಘೋಷವಾಕ್ಯದಡಿ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಶಿಕ್ಷಣ ಪಡೆಯುವ ಹಕ್ಕು, ಸುರಕ್ಷಿತ ವಾತಾವರಣದಲ್ಲಿ ಬೆಳೆಯುವ ಹಕ್ಕು ಹಾಗೂ ಗೌರವದಿಂದ ಬದುಕುವ ಹಕ್ಕುಗಳಿವೆ. ಮಕ್ಕಳ ಮೇಲಿನ ದೈಹಿಕ, ಮಾನಸಿಕ ಮತ್ತು ಲೈಂಗಿಕ ದೌರ್ಜನ್ಯವನ್ನು ತಡೆಯಲು ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.

ಹಿರಿಯ ನ್ಯಾಯವಾದಿ ಸಂಗಶೆಟ್ಟಿ ಪಾಟೀಲ್ ಅವರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ)-2012ರ ಕುರಿತು ಮಾಹಿತಿ ನೀಡಿದರು. ಮಕ್ಕಳ ರಕ್ಷಣೆಗಾಗಿ ಇರುವ ಕಾನೂನುಗಳು, ಕಾನೂನು ನೆರವು ಪಡೆಯುವ ವಿಧಾನ ಹಾಗೂ ಸಂಕಷ್ಟದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.

ಪ್ರಶಾಂತ್ ಬಿರಾದಾರ್ ಮಾತನಾಡಿ, ಶಾಲೆಗಳಲ್ಲಿ ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸುವುದರಿಂದ ಮಕ್ಕಳು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಯಾರಾದರೂ ಅಸುರಕ್ಷಿತವಾಗಿ ವರ್ತಿಸಿದರೆ ಅಥವಾ ದೌರ್ಜನ್ಯ ಎಸಗಿದರೆ ಸುಮ್ಮನಿರದೆ ಪೋಷಕರು, ಶಿಕ್ಷಕರು ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ಅಗತ್ಯವಿದ್ದರೆ 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಬೇಕು ಎಂದು ಸಲಹೆ ನೀಡಿದರು.

ಶಾಲೆಯ ಅಧ್ಯಕ್ಷ ಬಾಬುರಾವ್ ವೀರಶೆಟ್ಟೆ ಮಾತನಾಡಿ, ಮಕ್ಕಳು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದರ ಜತೆಗೆ ಇತರರ ಹಕ್ಕುಗಳನ್ನೂ ಗೌರವಿಸಬೇಕು. ಮಕ್ಕಳಿಗೆ ಸುರಕ್ಷಿತ ಮತ್ತು ಭಯಮುಕ್ತ ವಾತಾವರಣ ಕಲ್ಪಿಸುವುದು ಪೋಷಕರು, ಶಿಕ್ಷಕರು ಹಾಗೂ ಸಮಾಜದ ಜವಾಬ್ದಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂತೋಷ್ ಭಾಲೆಕರ್, ಬಸವರಾಜ್ ಬಿರಾದಾರ್, ಪರಮೇಶ್ವರ್ ಬಿರಾದಾರ್, ವಿನೋದಾ ಬಾಪನೂರ್, ಜ್ಯೋತಿಲಕ್ಷ್ಮಿ ತಪಶಾಳೆ, ಉಮಾದೇವಿ ತೆಲಂಗ್ ಹಾಗೂ ಜಗದೇವಿ ಚಿದ್ರೆ ಸೇರಿದಂತೆ ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಿಆರ್‌ಪಿ ಚಂದ್ರಕಾಂತ್ ತಳವಾಡೆ ಸ್ವಾಗತಿಸಿದರು. ಮುಖ್ಯಶಿಕ್ಷಕ ಚನ್ನಪ್ಪ ಚಿದ್ರೆ ನಿರೂಪಿಸಿದರು. ಸಹಶಿಕ್ಷಕಿ ಪದ್ಮಾವತಿ ಕಾಂಬಳೆ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor