ಬೀದರ್: ವಿದ್ಯಾರ್ಥಿಗಳ ಜೀವನದಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಗುರುಗಳು ನೀಡುವ ಜ್ಞಾನ, ಸಂಸ್ಕಾರ ಹಾಗೂ ಮಾರ್ಗದರ್ಶನವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಹೇಳಿದರು.

ನಗರದ ಸಾಯಿ ಆದರ್ಶ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲಿತ ಶಾಲೆಯ ಏಳ್ಗೆಗೆ ಹಾಗೂ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಳೆಯ ವಿದ್ಯಾರ್ಥಿಗಳು ಸಹಾಯಹಸ್ತ ಚಾಚಬೇಕು. ಶಾಲೆಯೊಂದಿಗೆ ಹಳೆಯ ವಿದ್ಯಾರ್ಥಿಗಳು ಭಾವನಾತ್ಮಕ ಸಂಬಂಧವನ್ನು ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಹಳೆಯ ವಿದ್ಯಾರ್ಥಿ ಹಾಗೂ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ್ ಹೆಬ್ಬಾಳೆ ಮಾತನಾಡಿ, “ಇಂದು ನಾನು ಈ ಸ್ಥಾನಕ್ಕೆ ಬರಲು ಸಾಯಿ ಆದರ್ಶ ಶಾಲೆಯೇ ಕಾರಣವಾಗಿದೆ. ಅಂದು ಗುರುಗಳು ಬಡಿದು ಬುದ್ಧಿ ಕಲಿಸಿದ್ದರಿಂದ ಇಂದು ನಾವು ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗಿದೆ. ಗುರುವಿನ ಕೃಪೆ ಇದ್ದಾಗ ಮಾತ್ರ ವಿದ್ಯಾರ್ಥಿಗಳು ಉದ್ಧಾರವಾಗಲು ಸಾಧ್ಯ” ಎಂದು ತಿಳಿಸಿದರು.

ಅಶೋಕ್ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಲವು ದಿನಗಳ ಬಳಿಕ ಭೇಟಿಯಾದ ಹಳೆಯ ವಿದ್ಯಾರ್ಥಿಗಳು ಪರಸ್ಪರ ಸಂತಸ ಹಂಚಿಕೊಂಡರು. ಬಳಿಕ ನಡೆದ ಸ್ನೇಹ ಸಮ್ಮಿಲನದಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಸಿಹಿ ನೆನಪುಗಳನ್ನು ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಮಹೇಶ್ ನಿಡೋದಾ, ಸಂದೀಪ್ ಪಾಟೀಲ್, ಅನೀಲ್ ಬೆಲ್ದಾರ್, ಸಂತೋಷ್ ಕಂದಗೂಳೆ, ನಾಗರಾಜ್ ಗೋಧೆಪುರಗೆ, ಸಂತೋಷ್ ಚಿಂಚೋಳೆ, ಧೋಂಡಿರಾಮ್, ಸೌರಭ್, ಸೀಮಾ, ರತ್ನಪ್ರಭ, ಸುವರ್ಣಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸೌಜನ್ಯ ಕುಲಕರ್ಣಿ ಸ್ವಾಗತ ಗೀತೆ ಹಾಡಿದರು. ಮಹೇಶ್ ಕುಂಬಾರ್ ನಿರೂಪಿಸಿದರು. ರಶ್ಮಿ ಚಟ್ಟಿ ಸ್ವಾಗತಿಸಿದರು. ನಿರುಪಮಾ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor