ಭಾಲ್ಕಿ: ತಾಲೂಕು ಸೇರಿದಂತೆ ಬೀದರ್ ಜಿಲ್ಲಾದ್ಯಂತ ಭಕ್ತರು ಅ.21ರಂದು ವಿಜಯದಶಮಿ ಹಬ್ಬವನ್ನು ಆಚರಿಸಬೇಕು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದೇವರು ಮನವಿ ಮಾಡಿದ್ದಾರೆ.

ನಗರದ ಹಿರೇಮಠ ಸಂಸ್ಥಾನದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಈ ವರ್ಷ ಜಿಲ್ಲೆಯಲ್ಲಿ ವಿಜಯದಶಮಿ (ದಸರಾ) ಹಬ್ಬದ ಆಚರಣೆ ಕುರಿತು ಭಕ್ತರಲ್ಲಿ ಗೊಂದಲ ಉಂಟಾಗಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ಅಕ್ಟೋಬರ್ 20ರಂದು ಹಾಗೂ ಇನ್ನು ಕೆಲವು ಕಡೆಗಳಲ್ಲಿ ಅಕ್ಟೋಬರ್ 21ರಂದು ಹಬ್ಬ ಆಚರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಭಕ್ತರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗಬಾರದು ಎಂದು ಅವರು ಹೇಳಿದರು.

ಪ್ರತಿವರ್ಷ ವಿಶ್ವವಿಖ್ಯಾತ ಮೈಸೂರು ದಸರಾ ನಡೆಯುವ ದಿನದಂದೇ ಜಿಲ್ಲೆಯಲ್ಲಿ ವಿಜಯದಶಮಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ಮಾದರಿಯಲ್ಲಿ ಈ ಬಾರಿಯೂ ಮೈಸೂರು ಸೇರಿದಂತೆ ರಾಜ್ಯದಾದ್ಯಂತ ಅಕ್ಟೋಬರ್ 21ರಂದು ವಿಜಯದಶಮಿ ಆಚರಿಸಲಾಗುತ್ತಿದೆ. ಆದ್ದರಿಂದ ಜಿಲ್ಲೆಯ ಭಕ್ತರೂ ಅಂದೇ ವಿಜಯದಶಮಿ ಆಚರಿಸಿ, ಹಬ್ಬದ ಸಂಭ್ರಮವನ್ನು ಹೆಚ್ಚಿಸಬೇಕು ಎಂದು ಗುರುಬಸವ ಪಟ್ಟದೇವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರವಚನ ಸೇವಾ ಸಮಿತಿಯ ಅಧ್ಯಕ್ಷ ಅಶೋಕ್ ಬಾವುಗೆ, ಸಂತೋಷ್ ಹಡಪದ್, ಸುಧಾಕರ್ ಜಾಧವ್ ಹಾಗೂ ಬಾಬುರಾವ್ ಭಾಂಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor