Bidar | ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಮನವಿ
ಬೀದರ್: ನವದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ (ಭೀಮಮಾರ್ಗ) ಜಿಲ್ಲಾ ಘಟಕವು ಶುಕ್ರವಾರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.
ಮನವಿಯಲ್ಲಿ, ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಾಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ನೀಡಿದ್ದು, ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಹಿಂಸಾತ್ಮಕ ಕ್ರಮ ಕೈಗೊಳ್ಳುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಲಾಗಿದೆ.
ಘಟನೆಯ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಗಿದೆ. ಅಲ್ಲದೆ, ಘಟನೆಯಲ್ಲಿ ಆಡಳಿತಾತ್ಮಕ ಅಥವಾ ರಾಜಕೀಯ ಹೊಣೆಗಾರಿಕೆ ಕಂಡುಬಂದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ವಿದ್ಯಾರ್ಥಿಗಳ ಹಕ್ಕುಗಳು ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಘಟನೆಯ ಸಂಬಂಧ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದರೆ ಹಾಗೂ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡದಿದ್ದರೆ ದಲಿತ ಸಂಘರ್ಷ ಸಮಿತಿ (ಭೀಮಮಾರ್ಗ) ಜಿಲ್ಲಾ ಸಮಿತಿ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಬಿ.ಎನ್. ವೆಂಕಟೇಶ್, ಜಿಲ್ಲಾ ಸಂಚಾಲಕ ಸಂಜುಕುಮಾರ್ ಮೇತ್ರೆ, ಜಿಲ್ಲಾ ಸಂಘಟನಾ ಸಂಚಾಲಕ ದಶರಥ್ ದೊಡ್ಡಮನಿ, ಜಿಲ್ಲಾ ಸಂಯೋಜನಾ ಸಂಚಾಲಕ ಕಾಶಿನಾಥ್ ಗಾಯಕವಾಡ್, ತಾಲೂಕು ಸಂಚಾಲಕ ತುಕಾರಾಮ್ ಹಸನ್ಮುಖಿ, ವಿನೋದ್ ಗುಪ್ತಾ, ಸುಧಾಕರ್ ಅಲ್ಲಾಪೂರೆ ಹಾಗೂ ಮಾಣೀಕ್ ಪವಾರ್ ಸೇರಿದಂತೆ ಹಲವರು ಇದ್ದರು.