Bidar | ಕಾರಂಜಾ ಸಂತ್ರಸ್ತರಿಗೆ ಏಕರೂಪ ಪರಿಹಾರ ಸೂತ್ರದಡಿ ತಕ್ಷಣ ಹಣ ಬಿಡುಗಡೆಗೆ ಆಗ್ರಹ
ಬೀದರ್: ರಾಜ್ಯ ಸರ್ಕಾರ ಕಾರಂಜಾ ರೈತ ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಹಲವು ಬಾರಿ ಭರವಸೆ ನೀಡಿದ್ದರೂ, ಇದುವರೆಗೆ ಪರಿಹಾರ ಬಿಡುಗಡೆಯಾಗಿಲ್ಲ. ಮುಖ್ಯಮಂತ್ರಿ ಅವರು ಸಂತ್ರಸ್ತರನ್ನು ವಿಶೇಷವಾಗಿ ಭೇಟಿ ಮಾಡಿ, ಕಾಲಮಿತಿಯಲ್ಲಿ ಪರಿಹಾರ ಒದಗಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ, ಸರ್ಕಾರ ಮಾನವೀಯ ದೃಷ್ಟಿಕೋನದಿಂದ ಏಕರೂಪ ಪರಿಹಾರ ಸೂತ್ರ ಅನುಸರಿಸಿ ತಕ್ಷಣ ಪರಿಹಾರ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಹೋರಾಟಗಾರ ಹಾಗೂ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ. ಲಕ್ಷ್ಮಣ ದಸ್ತಿ ಆಗ್ರಹಿಸಿದರು.
ಕಾರಂಜಾ ರೈತ ಸಂತ್ರಸ್ತರ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಮುಂದಿನ ಹೋರಾಟದ ರೂಪುರೇಷೆಗಳನ್ನು ರೂಪಿಸಲು ಡಾ. ಲಕ್ಷ್ಮಣ ದಸ್ತಿ ಅವರೊಂದಿಗೆ ರೈತ ಸಂತ್ರಸ್ತರ ಮುಖಂಡರು ಸಮಾಲೋಚನಾ ಸಭೆ ನಡೆಸಿದರು.
ಬೀದರ್ ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿರುವ ಕಾರಂಜಾ ರೈತ ಸಂತ್ರಸ್ತರ ಪರಿಹಾರದ ವಿಚಾರದಲ್ಲಿ ಜಿಲ್ಲೆಯ ಸಚಿವರು ಹಾಗೂ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿರುವುದು ಆಶಾದಾಯಕವಾಗಿದೆ. ಈ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ, ನಿಗದಿತ ಕಾಲಮಿತಿಯಲ್ಲಿ ರೈತರಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಮಸ್ಯೆಯ ಪರಿಹಾರಕ್ಕಾಗಿ ಆದಷ್ಟು ಶೀಘ್ರದಲ್ಲಿ ಜಿಲ್ಲೆಯ ಸಚಿವರು ಹಾಗೂ ಶಾಸಕರನ್ನು ಭೇಟಿಯಾಗಿ, ಸಂತ್ರಸ್ತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಹಾಗೂ ಬೀದರ್ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಹುಚಕನಳ್ಳಿ, ಮುಖಂಡರಾದ ರಾಜಪ್ಪ ಕೋಸಂ, ಭೀಮರೆಡ್ಡಿ, ಡಾ. ರಾಜಶೇಖರ್, ಯೂಸೂಫ್ ಮಿಯಾ ಹಾಗೂ ಅಹ್ಮದ್ ಮಿಯಾ ಸೊಲಾಪೂರಿ ಬಗ್ದಲ್ ಉಪಸ್ಥಿತರಿದ್ದರು.