ಬೀದರ್ : 12ನೇ ಶತಮಾನದ ಬಸವಾದಿ ಶರಣರು ಸಮ ಸಮಾಜ ನಿರ್ಮಾಣಕ್ಕಾಗಿ ನೀಡಿದ ವಚನ ಸಾಹಿತ್ಯವು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿದೆ. ಈ ಅಮೂಲ್ಯ ವಚನ ಸಾಹಿತ್ಯವನ್ನು ಕೇವಲ ಪುಸ್ತಕಗಳಿಗೆ ಸೀಮಿತಗೊಳಿಸದೆ, ಪ್ರತಿಯೊಬ್ಬರ ಮನೆ ಮನಗಳಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಕರೆ ನೀಡಿದರು.

ಔರಾದ್ ತಾಲೂಕಿನ ಮುಸ್ತಾಪುರ ಗ್ರಾಮದ ‘ಬಸವ ಮಹಾಮನೆ’ ಆವರಣದಲ್ಲಿ ಆಯೋಜಿಸಿದ್ದ ಚಿನ್ಮಯಜ್ಞಾನಿ ಚನ್ನಬಸವೇಶ್ವರ ಜಯಂತಿ ಹಾಗೂ ಅನುಭವ ಮಂಟಪದ ಧೂಪದ ಗೊಗ್ಗವ್ವೆ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮುಸ್ತಾಪುರದ ಈ ಬಸವ ಮಹಾಮನೆ ಆವರಣದಲ್ಲಿ ಗುರು ಬಸವಣ್ಣನವರ ಭವ್ಯ ಪುತ್ಥಳಿ ಸೇರಿದಂತೆ ಎಲ್ಲ ಶರಣರ ಮೂರ್ತಿಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಷಟಸ್ಥಲ ಧ್ವಜಾರೋಹಣ ನೆರವೇರಿಸಿದ ಯಾದಗಿರಿಯ ವೈದ್ಯಾಧಿಕಾರಿ ಡಾ. ಮಹೇಶ್ ಬಿರಾದಾರ್ ಮಾತನಾಡಿ, ಬಸವ ತತ್ವವು ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ. ಈ ಭಾಗದಲ್ಲಿ ಬಸವ ತತ್ವ ಎಲ್ಲೆಡೆ ಪಸರಿಸುವಂತಾಗಬೇಕು. ಯುವ ಪೀಳಿಗೆಗೆ ಶರಣರ ವಿಚಾರಧಾರೆಗಳನ್ನು ತಲುಪಿಸಲು ಇಲ್ಲಿ ಸುಸಜ್ಜಿತ ವಚನ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಯುವ ಮುಖಂಡ ರತಿಕಾಂತ್ ಮೇತ್ರೆ ಮಾತನಾಡಿ, ಮುಸ್ತಾಪುರದ ಬಸವ ಮಹಾಮನೆಯು ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿ ಉತ್ತರೋತ್ತರವಾಗಿ ಬೆಳೆಯಲಿ. ಇಲ್ಲಿ ಪ್ರತಿದಿನ ಬಸವಾದಿ ಶರಣರ ಅನುಭಾವ ಸಾಹಿತ್ಯದ ಕುರಿತು ಚಿಂತನೆ ನಡೆಯಲಿ. ಪ್ರತಿ ವಾರ ಪ್ರಾರ್ಥನೆ ಹಾಗೂ ಪ್ರತಿ ತಿಂಗಳು ಮಾಸಿಕ ಶರಣ ಸಂಗಮ ಕಾರ್ಯಕ್ರಮಗಳು ಆಯೋಜನೆಗೊಂಡು, ಅವುಗಳ ಸಂದೇಶ ನಾಡಿನೆಲ್ಲೆಡೆ ಹರಡುವಂತಾಗಲಿ ಎಂದು ಹಾರೈಸಿದರು.

ಅಂದು ಡಾ. ಚನ್ನಬಸವಾನಂದ ಸ್ವಾಮೀಜಿ ಅವರ ಜನ್ಮದಿನವೂ ಆಗಿದ್ದರಿಂದ ಭಕ್ತರು ಅತ್ಯಂತ ಸಂಭ್ರಮದಿಂದ ಜನ್ಮದಿನ ಆಚರಿಸಿದರು. ಈ ವೇಳೆ ಮಾತೆ ಸತ್ಯಾದೇವಿ ಅವರು ಸಮ್ಮುಖ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ್ ಸ್ವಾಮಿ, ಶಿವಕುಮಾರ್ ಘಾಟೆ, ನ್ಯಾಯವಾದಿ ಅಶೋಕ್ ಮಾನೂರೆ, ಶಿವಶರಣಪ್ಪ ಪಾಟೀಲ್ ಹಾರೂರಗೇರಿ, ಗಣಪತಿ ಬಿರಾದಾರ್, ರವಿಕಾಂತ್ ಬಿರಾದಾರ್, ಬಸವರಾಜ್ ಮಾಲಿಪಾಟೀಲ್, ಶರಣಪ್ಪ ನಾಗಲಗಿದ್ದಿ, ಪ್ರಕಾಶ್ ದೇಶಮುಖ, ಧರ್ಮೇಂದ್ರ ಪೂಜಾರಿ, ಬಸವರಾಜ್ ಸಂಗಮದ್, ಶಿವರಾಜ್ ಪಾಟೀಲ್ ಅತಿವಾಳ್ ಸೇರಿದಂತೆ ಮುಸ್ತಾಪುರ ಗ್ರಾಮಸ್ಥರು ಉಪಸ್ಥಿತರಿದ್ದರು.

ಉಮಾಕಾಂತ್ ಬೋರ್ಗಿ ನಿರೂಪಿಸಿದರು. ಬಸವಪ್ಪ ಕಾರಾಮುಂಗೆ ಸ್ವಾಗತಿಸಿದರು. ಗಣಪತಿ ದೇಶಮುಖ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor