×
Ad

bidar | ಮತ್ಸ್ಯಾಶ್ರಯ ಯೋಜನೆ ಫಲಾನುಭವಿಗಳ ಪಟ್ಟಿ ರದ್ದುಪಡಿಸಲು ಡಿಎಸ್‌ಎಸ್ ಆಗ್ರಹ

ವೃತ್ತಿಪರ ಮೀನುಗಾರರಲ್ಲದವರಿಗೆ ಮನೆ ಹಂಚಿಕೆ ಆರೋಪ ; ಜಿಲ್ಲಾಧಿಕಾರಿಗೆ ಮನವಿ

Update: 2026-07-14 18:12 IST

ಬೀದರ್: ಔರಾದ್ ತಾಲೂಕಿನ 2024–25ನೇ ಸಾಲಿನ ಮತ್ಸ್ಯಾಶ್ರಯ ಯೋಜನೆಯಡಿ ವಸತಿ ಹಂಚಿಕೆಗಾಗಿ ವೃತ್ತಿಪರ ಮೀನುಗಾರರಲ್ಲದವರನ್ನು ಫಲಾನುಭವಿಗಳ ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಪಿಸಿ, ಪಟ್ಟಿಯನ್ನು ಕೂಡಲೇ ರದ್ದುಪಡಿಸಿ ಅರ್ಹ ವೃತ್ತಿಪರ ಮೀನುಗಾರರಿಗೆ ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಒತ್ತಾಯಿಸಿದೆ.

ಈ ಸಂಬಂಧ ಸಮಿತಿಯ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ, ಔರಾದ್ (ಬಿ) ತಾಲೂಕಿನ ಸಂತಪೂರ್ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ 2024–25ನೇ ಸಾಲಿನ ಮತ್ಸ್ಯಾಶ್ರಯ ಯೋಜನೆಗಾಗಿ ಸಿದ್ಧಪಡಿಸಿರುವ ಫಲಾನುಭವಿಗಳ ಪಟ್ಟಿಯಲ್ಲಿ ವೃತ್ತಿಪರ ಮೀನುಗಾರರಲ್ಲದವರನ್ನು ಸೇರಿಸಿರುವುದಾಗಿ ಆರೋಪಿಸಲಾಗಿದೆ.

ಕೆಲವರು ಗ್ರಾಮ ಪಂಚಾಯಿತಿಯಿಂದ ಸುಳ್ಳು ದಾಖಲೆಗಳನ್ನು ಪಡೆದು ಫಲಾನುಭವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಈ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ದೂರಲಾಗಿದೆ.

ಆದ್ದರಿಂದ, ಫಲಾನುಭವಿಗಳ ಪಟ್ಟಿಯನ್ನು ಕಾನೂನುಬದ್ಧವಾಗಿ ಮರುಪರಿಶೀಲಿಸಿ ರದ್ದುಪಡಿಸಿ, ನಿಯಮಾನುಸಾರ ಅರ್ಹ ವೃತ್ತಿಪರ ಮೀನುಗಾರರ ಹೊಸ ಪಟ್ಟಿಯನ್ನು ಸಿದ್ಧಪಡಿಸಿ ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ಸಮಿತಿ ಆಗ್ರಹಿಸಿದೆ.

ಇದಲ್ಲದೆ, ಮೀನುಗಾರಿಕೆ ಇಲಾಖೆಯಲ್ಲಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ತಕ್ಷಣ ವರ್ಗಾವಣೆ ಮಾಡಬೇಕು ಹಾಗೂ ಈ ಅವ್ಯವಹಾರಕ್ಕೆ ಕಾರಣರಾದ ತಾಲ್ಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಚಾಲಕ ಧನರಾಜ್ ಮುಸ್ತಾಪೂರ್, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಬಿರಾದಾರ್ (ಲಾಧಾ), ಜಿಲ್ಲಾ ಸಂಚಾಲಕ ವಿಜಯಕುಮಾರ್ ಐಹೊಳೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News