ಬೀದರ್ : ನೈಸ್ ಯೋಜನೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪು ಜಾರಿಗೆ ತರಬೇಕು ಹಾಗೂ ಪ್ರತಿಭಟನೆ ನಡೆಸುತ್ತಿದ್ದ ರೈತ-ಕಾರ್ಮಿಕ ಸಂಘಗಳ ಮುಖಂಡರ ಬಂಧನವನ್ನು ಖಂಡಿಸಿ ಡಿವೈಎಫ್‌ಐ ವತಿಯಿಂದ ಶನಿವಾರ ಹುಮನಾಬಾದ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ಮಾತನಾಡಿ, ಹೈಕೋರ್ಟ್ ನೈಸ್ ಭೂಮಿಯನ್ನು ರೈತರಿಗೆ ವಾಪಸ್ ನೀಡಬೇಕು ಮತ್ತು ಟೋಲ್ ಸಂಗ್ರಹವನ್ನು ನಿಲ್ಲಿಸುವಂತೆ ತೀರ್ಪು ನೀಡಿದ್ದರೂ, ರಾಜ್ಯ ಸರ್ಕಾರ ಅದನ್ನು ಜಾರಿಗೆ ತಂದಿಲ್ಲ ಎಂದು ಆರೋಪಿಸಿದರು. ಭೂಮಿ ಕಳೆದುಕೊಂಡ ರೈತರ ಪರವಾಗಿ ಹೋರಾಟ ನಡೆಸುತ್ತಿರುವ ರೈತ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರನ್ನು ಬಂಧಿಸುವ ಮೂಲಕ ಸರ್ಕಾರ ಸಾರ್ವಜನಿಕರ ಧ್ವನಿಯನ್ನು ದಮನಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು.ಬಸವರಾಜ್ ಸೇರಿದಂತೆ ಹಲವು ರೈತ ಮತ್ತು ಕಾರ್ಮಿಕ ಮುಖಂಡರನ್ನು ಬಂಧಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇನ್ನೂ ಕೆಲವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ದೂರಿದರು.

ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಡೆ ಪ್ರತಿಭಟನೆಗೆ ಅವಕಾಶ ನೀಡದ ಸರ್ಕಾರ, ನೈಸ್ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಜಾರಿಗೆ ತರಲು ವಿಳಂಬ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕು, ಸಾರ್ವಜನಿಕರಿಗೆ ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕು ಹಾಗೂ ಹೈಕೋರ್ಟ್ ತೀರ್ಪಿನ ಅನ್ವಯ ನೈಸ್ ಭೂಮಿಯನ್ನು ರೈತರಿಗೆ ವಾಪಸ್ ನೀಡುವುದರ ಜೊತೆಗೆ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಡಿವೈಎಫ್ಐ ಜಿಲ್ಲಾ ಸಂಚಾಲಕ ಶಶಿಕಾಂತ್ ಡಾಂಗೆ, ಕಟ್ಟಡ ಕಾರ್ಮಿಕ ಜಿಲ್ಲಾ ಸಂಚಾಲಕ ಗೌಸೋದ್ದೀನ್, ರೇಷ್ಮಾ ಹಂಸರಾಜ್, ಬಸವರಾಜ್ ಮಾಳಗೆ, ಕಟ್ಟಡ ಕಾರ್ಮಿಕರ ಜಿಲ್ಲಾ ಸಂಚಾಲಕ ನಬಿ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor