ಹುಮನಾಬಾದ್ : ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಬೇಕು ಹಾಗೂ ಉತ್ತಮ ಮಳೆಯಾಗಬೇಕು ಎಂಬ ಹರಕೆಯೊಂದಿಗೆ ಎಂಎಲ್‌ಸಿ ಭೀಮರಾವ್ ಪಾಟೀಲ್ ಅವರು ಶನಿವಾರ ಜನವಾಡದ ಹನುಮಾನ್ ದೇವಸ್ಥಾನದಲ್ಲಿ ಹಾಲಿನ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಿದರು.

ಜನವಾಡದಿಂದ ಆರಂಭವಾದ ಪಾದಯಾತ್ರೆ ರಜಂತಲ್‌ನ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದವರೆಗೆ ಮುಂದುವರಿಯಿತು.

ಈ ವೇಳೆ ಮಾತನಾಡಿದ ಭೀಮರಾವ್ ಪಾಟೀಲ್, ಯಾವುದೇ ಪಕ್ಷದ ಧ್ವಜ ಅಥವಾ ಶಾಲು ಬಳಸದೆ ಪಾದಯಾತ್ರೆ ನಡೆಸುತ್ತಿರುವುದಾಗಿ ಹೇಳಿದರು. ರೈತರು ಮತ್ತು ಸಾರ್ವಜನಿಕರು ಈಗಾಗಲೇ ಹಲವು ಹೋರಾಟಗಳು ಹಾಗೂ ಪಾದಯಾತ್ರೆಗಳಿಂದ ಸಂಕಷ್ಟ ಅನುಭವಿಸಿದ್ದಾರೆ. ಮತ್ತೊಮ್ಮೆ ಅವರನ್ನು ಕಷ್ಟಕ್ಕೆ ಸಿಲುಕಿಸಬಾರದು ಎಂಬ ಉದ್ದೇಶದಿಂದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ತಿಳಿಸದೇ ತಾವೇ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಶಾಸಕ ಸಿದ್ದು ಪಾಟೀಲ್ ಅವರ ಪಾದಯಾತ್ರೆಗೆ ಬೆಂಬಲ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಆ ಪಾದಯಾತ್ರೆಯಲ್ಲಿ ಬಿಜೆಪಿ ಧ್ವಜ ಬಳಸಲಾಗುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅದರಲ್ಲಿ ಭಾಗವಹಿಸದಿರಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಪುನರಾರಂಭವಾಗಬೇಕು ಹಾಗೂ ಮಳೆಯಾಗಬೇಕು ಎಂಬ ಸಂಕಲ್ಪದೊಂದಿಗೆ ರಜಂತಲ್‌ನ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ 101 ತೆಂಗಿನಕಾಯಿಗಳನ್ನು ಒಡೆದು ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪಾದಯಾತ್ರೆಯಲ್ಲಿ ಸಂಗಮೇಶ್ ಚಿದ್ರಿ, ಹರಾವೇಂದ್ರ ಸಿಂಗ್, ವೀರಣ್ಣ ತುಪ್ಪದ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor