ಬೀದರ್: ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ), ಭಾಲ್ಕಿ ಮತ್ತು ಬಸವಕಲ್ಯಾಣ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳು ಹಾಗೂ ಹುಮನಾಬಾದ್ ಸಹಾಯಕ ತನಿಖಾ ಠಾಣೆಯಲ್ಲಿ ಖಾಯಂ ಅಧಿಕಾರಿಗಳ ನೇಮಕ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಆಗ್ರಹಿಸಿದೆ.

ಜಿಲ್ಲಾಧಿಕಾರಿಗಳ ಮೂಲಕ ಸಾರಿಗೆ ಆಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ, ನಾಲ್ಕೂ ಕಚೇರಿಗಳ ಪ್ರಭಾರವನ್ನು ಒಬ್ಬರೇ ಹಿರಿಯ ಮೋಟಾರು ವಾಹನ ನಿರೀಕ್ಷಕ ಮಹಮ್ಮದ್ ಜಾಫರ್ ಸಾದಿಕ್ ಅವರಿಗೆ ವಹಿಸಿರುವುದರಿಂದ ಆಡಳಿತ ವ್ಯವಸ್ಥೆ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಲಾಗಿದೆ.

ಅಧಿಕಾರಿಗಳ ಕೊರತೆಯಿಂದ ಚಾಲನಾ ಪರವಾನಗಿ ನವೀಕರಣ, ಹೊಸ ಲೈಸೆನ್ಸ್, ಆರ್‌ಸಿ ವರ್ಗಾವಣೆ, ಹೈಪೋಥಿಕೇಶನ್, ಆಟೋ ರಿಕ್ಷಾ ಪರ್ಮಿಟ್ ಹಾಗೂ ವಾಹನಗಳ ನವೀಕರಣ ಸೇರಿದಂತೆ ಹಲವು ಸೇವೆಗಳು ಸಕಾಲಕ್ಕೆ ದೊರೆಯದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಬೀದರ್, ಔರಾದ್, ಕಮಲನಗರ ಹಾಗೂ ಬೀದರ್ ದಕ್ಷಿಣ ತಾಲೂಕುಗಳ ವ್ಯಾಪ್ತಿಗೆ ಸೇವೆ ನೀಡುವ ಈ ಕಚೇರಿಗಳಿಗೆ ಮುಂದಿನ 15 ದಿನಗಳೊಳಗೆ ಖಾಯಂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ನೇಮಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಪೀಟರ್ ಚಟಗುಪ್ಪಾ, ಜಿಲ್ಲಾ ಸಂಚಾಲಕ ಬಸವರಾಜ್ ನಂದಗಾಂವ್, ಸಹ ಕಾರ್ಯದರ್ಶಿ ಮೊಜೆಸ್ ಅಣದೂರಕರ್, ಅಶೋಕ್ ಕಡ್ಯಾಳ್, ಮೈಕಲ್ ಕಡ್ಯಾಳ್, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ನಾಗೇಶ್ ರಾಯಣ್ಣೂರ್, ತಾಲೂಕಾಧ್ಯಕ್ಷ ನಿಲೇಶ್ ರಾಠೋಡ್, ನಗರ ಪ್ರಧಾನ ಕಾರ್ಯದರ್ಶಿ ಗಿರೀಶ್ ಓಂಕಾರ್, ಮುಖಂಡರಾದ ಸಂಜು ಚಿಮಕೋಡ್, ಸಚಿನ್ ಕುದ್ರೆ, ರಾಜಗೊಂಡ್ ಅಣದೂರಕರ್, ಜೋಯ್ ಮೈಲೂರ್, ಅಭಿಷೇಕ್, ಸಾಗರ್ ಕಡ್ಯಾಳ್ ಹಾಗೂ ರಾಹುಲ್ ಜಾಧವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor