ಬೀದರ್: ಜಿಲ್ಲೆಯ ರೈತರು ಮತ್ತು ಕಾರ್ಮಿಕರ ಜೀವನಾಡಿಯಾಗಿರುವ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ, ಲೀಸ್ ಆಧಾರದಲ್ಲಿ ಮರು ಆರಂಭಿಸಲು ರಾಜ್ಯ ಸರ್ಕಾರ ಭರವಸೆ ನೀಡಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಸ್ವಾಗತಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಮಂತ್ ಬಿರಾದಾರ್, ಕಳೆದ 5–6 ವರ್ಷಗಳಿಂದ ಸ್ಥಗಿತಗೊಂಡಿರುವ ಕಾರ್ಖಾನೆಯ ಮೇಲಿನ ಸಾಲ ವಸೂಲಿಗಾಗಿ ಡಿಸಿಸಿ ಬ್ಯಾಂಕ್ ಸೆಪ್ಟೆಂಬರ್ 2ರಂದು ಟೆಂಡರ್ ಮೂಲಕ ಹರಾಜು ಪ್ರಕ್ರಿಯೆ ಆರಂಭಿಸಿತ್ತು ಎಂದು ಹೇಳಿದರು.

ಹರಾಜು ಪ್ರಕ್ರಿಯೆಯನ್ನು ವಿರೋಧಿಸಿ ರೈತರು ಹಾಗೂ ಬಿಎಸ್‌ಎಸ್‌ಕೆ ಕಾರ್ಮಿಕರ ಸಂಘದ ವತಿಯಿಂದ ಡಿಸಿಸಿ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗಿತ್ತು. ಕಾರ್ಖಾನೆ ಉಳಿಸುವ ಹೋರಾಟಕ್ಕೆ ಬಿಜೆಪಿ ಸಹ ಬೆಂಬಲ ನೀಡಿತ್ತು ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಅವರು ಹರಾಜು ಪ್ರಕ್ರಿಯೆ ಕೈಬಿಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಕಾರ್ಖಾನೆ ಉಳಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಬೆಂಗಳೂರಿನಲ್ಲಿ ಸರ್ಕಾರದ ಗಮನ ಸೆಳೆಯಲಾಯಿತು ಎಂದು ಹೇಳಿದರು.

ಸೆಪ್ಟೆಂಬರ್ 21 ಮತ್ತು 22ರಂದು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿತ್ತು. ಕಾರ್ಖಾನೆಯನ್ನು ಲೀಸ್ ಮೇಲೆ ನೀಡುವ ಕುರಿತು ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುವ ಭರವಸೆ ಅವರು ನೀಡಿದ್ದರು ಎಂದು ತಿಳಿಸಿದರು.

ಸೆಪ್ಟೆಂಬರ್ 23ರಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ್ ಪಾಟೀಲ್ ಮತ್ತು ಭೀಮರಾವ್ ಪಾಟೀಲ್ ಹಾಗೂ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು ಎಂದು ಹೇಳಿದರು.

ನಿಯೋಗದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಬಿಎಸ್‌ಎಸ್‌ಕೆ ಕಾರ್ಖಾನೆಯನ್ನು ಹರಾಜು ಮಾಡದಂತೆ ಅಪೆಕ್ಸ್ ಬ್ಯಾಂಕ್‌ಗೆ ಸೂಚನೆ ನೀಡಿದ್ದು, ಕಾರ್ಖಾನೆಯನ್ನು ಲೀಸ್ ಆಧಾರದಲ್ಲಿ ಮರು ಆರಂಭಿಸಲು ಲಿಖಿತ ಒಪ್ಪಿಗೆ ನೀಡಿದ್ದಾರೆ ಎಂದು ಶ್ರೀಮಂತ್ ಬಿರಾದಾರ್ ತಿಳಿಸಿದರು.

ಸರ್ಕಾರ ನೀಡಿರುವ ಭರವಸೆಯಂತೆ ಮುಂಬರುವ ಹಂಗಾಮಿನಲ್ಲೇ ಕಾರ್ಖಾನೆ ಮರು ಆರಂಭವಾಗಬೇಕು. ಒಂದು ವೇಳೆ ಭರವಸೆಗಳು ಜಾರಿಗೆ ಬರದಿದ್ದರೆ ರೈತರು ಮತ್ತು ಕಾರ್ಮಿಕರು ತೀವ್ರ ಹೋರಾಟಕ್ಕೆ ಮುಂದಾಗಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಿಎಸ್‌ಎಸ್‌ಕೆ ಕಾರ್ಮಿಕ ಸಂಘದ ಅಧ್ಯಕ್ಷ ಅರ್ಜುನ್ ತಮಗಿಕರ್, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಸ್ವಾಮಿ ಸಿರ್ಸಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್ ಜಮಖಂಡಿ, ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾವತಿ ಅಣ್ಣೆಪ್ಪನವರ್, ಔರಾದ್ ತಾಲೂಕಾಧ್ಯಕ್ಷ ಪ್ರಕಾಶ್ ಬಾವುಗೆ, ಬಸವಕಲ್ಯಾಣ ತಾಲೂಕಾಧ್ಯಕ್ಷ ಸುಭಾಷ್, ಭಾಲ್ಕಿ ತಾಲೂಕಾಧ್ಯಕ್ಷ ಬಾಬುರಾವ್ ಜೊಳದಾಬಕಾ, ಬಿಎಸ್‌ಎಸ್‌ಕೆ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಕಟಗಿ, ಬೀದರ್ ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ್ ಚೆಕ್ಕಿ, ರೈತ ಮುಖಂಡರಾದ ಧೂಳಯ್ಯ ಸ್ವಾಮಿ, ಮಲ್ಲಿಕಾರ್ಜುನ್ ಭಂಡಾರಿ, ಜಾನಸನ್, ಶಿವಕುಮಾರ್ ಸೈಬಣ್ಣ, ಅರ್ಜುನ್ ಲಾಡ್ಕರ್, ಬಸಯ್ಯ ಸ್ವಾಮಿ ಹಾಗೂ ಸಂಗಪ್ಪ ಖೇಣಿರಂಜೋಳ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor