Bidar | ನಕಲಿ ವೈದ್ಯರು, ಕ್ಲಿನಿಕ್‌ಗಳ ವಿರುದ್ಧ ಕ್ರಮಕ್ಕೆ ಕರವೇ ಕಾವಲುಪಡೆ ಆಗ್ರಹ
ಬೀದರ್: ಜಿಲ್ಲೆಯಲ್ಲಿ ನಕಲಿ ವೈದ್ಯರು ಹಾಗೂ ನಕಲಿ ಕ್ಲಿನಿಕ್‌ಗಳ ಹಾವಳಿಯನ್ನು ತಡೆದು, ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಕ್ಲಿನಿಕ್‌ಗಳನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾವಲುಪಡೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಸಹಾಯಕ ಆಯುಕ್ತರ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಕಾರ್ಯಕರ್ತರು, ಉಪವಿಭಾಗ ದಂಡಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವೈದ್ಯರೆಂದು ಹೇಳಿಕೊಂಡು ಅಕ್ರಮವಾಗಿ ಚಿಕಿತ್ಸೆ ನೀಡುತ್ತಿರುವ ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ನಕಲಿ ಕ್ಲಿನಿಕ್‌ಗಳನ್ನು ತಕ್ಷಣ ಮುಚ್ಚಿಸಿ, ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಖಾಸಗೀಕರಣಕ್ಕೆ ಕಡಿವಾಣ ಹಾಕಿ, ಸಾರ್ವಜನಿಕರಿಗೆ ಗುಣಮಟ್ಟದ ಹಾಗೂ ಸುಲಭವಾಗಿ ಲಭ್ಯವಾಗುವ ಸರ್ಕಾರಿ ಆರೋಗ್ಯ ಸೇವೆಗಳನ್ನು ಒದಗಿಸಬೇಕು ಎಂದು ಕರವೇ ಕಾವಲುಪಡೆ ಒತ್ತಾಯಿಸಿತು.
ಜಿಲ್ಲೆಯಲ್ಲಿ ನಕಲಿ ವೈದ್ಯರು ಮತ್ತು ನಕಲಿ ಕ್ಲಿನಿಕ್‌ಗಳು ಕಾರ್ಯನಿರ್ವಹಿಸಲು ಅವಕಾಶ ನೀಡಿರುವ ಸಂಬಂಧಪಟ್ಟ ವೈದ್ಯಕೀಯ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಿ, ತಪ್ಪಿತಸ್ಥರಾಗಿದ್ದರೆ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಗ್ರಾಮೀಣ ಭಾಗಗಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರು, ಔಷಧಗಳು, ಅಗತ್ಯ ಸಿಬ್ಬಂದಿ ಮತ್ತು ಇತರೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವಂತೆ ಸರ್ಕಾರವನ್ನು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರವೇ ಕಾವಲುಪಡೆ ಜಿಲ್ಲಾಧ್ಯಕ್ಷ ಅವಿನಾಶ್ ಬುದೇರಕರ್, ರಾಜ್ಯ ಉಪಾಧ್ಯಕ್ಷ ವಿ.ಎಂ ಭಂಗೂರೆ, ಸುಬ್ಬಣ್ಣ ಕರಕನಳ್ಳಿ, ಕಲ್ಯಾಣ ಕರ್ನಾಟಕ ವಿಭಾಗಿ ಅಧ್ಯಕ್ಷ ಸ್ಟೀಪನ್ ಪೌಲ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಜೋನತನ್, ಜಿಲ್ಲಾ ಉಪಾಧ್ಯಕ್ಷ ಶರಣಪ್ಪ ಲಾಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಮಿಯೋದ್ಧೀನ, ಅರುಣ ಪೌಲ್ ಅಲ್ಲಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ದಿಶಾನ್, ಬೀದರ್ ತಾಲ್ಲೂಕಾಧ್ಯಕ್ಷ ಸತೀಶ್, ಬಸವಕಲ್ಯಾಣ ತಾಲ್ಲೂಕಾಧ್ಯಕ್ಷ ಸುರೇಶ್ ಹಾಗೂ ಸುನೀಲ್ ಸೇರಿದಂತೆ ಇತರರು ಇದ್ದರು.