Bidar | ಮರಖಲ ಗ್ರಾಮದಲ್ಲಿ ಕೈಚೀಲದಲ್ಲಿ ನವಜಾತ ಶಿಶು ಪತ್ತೆ
ಸಾಂದರ್ಭಿಕ ಚಿತ್ರ
ಬೀದರ್: ಜಿಲ್ಲೆಯ ಬೀದರ್ ತಾಲೂಕಿನ ಮರಖಲ ಗ್ರಾಮದ ಬಳಿ ಗುರುವಾರ ಒಂದು ದಿನದ ನವಜಾತ ಗಂಡು ಶಿಶು ಕೈಚೀಲದಲ್ಲಿ ಪತ್ತೆಯಾಗಿದ್ದು, ಮಗುವನ್ನು ಬಿಸಾಡಿ ಹೋದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೀದರ್–ಔರಾದ್ ರಾಜ್ಯ ಹೆದ್ದಾರಿಯ ಮರಖಲ ಗ್ರಾಮದ ಸಮೀಪ ಅಪರಿಚಿತರು ಮಗುವನ್ನು ಬಿಸಾಡಿ ಪರಾರಿಯಾಗಿದ್ದಾರೆ. ಶಿಶುವಿಗೆ ಬಟ್ಟೆ ಸುತ್ತಿ ಕೈಚೀಲದಲ್ಲಿ ಹಾಕಿ ರಸ್ತೆ ಬದಿಯಲ್ಲಿ ಎಸೆಯಲಾಗಿತ್ತು ಎಂದು ತಿಳಿದುಬಂದಿದೆ.
ನವಜಾತ ಗಂಡು ಶಿಶುವನ್ನು ರಸ್ತೆ ಬದಿಯಲ್ಲಿ ಬಿಸಾಡಿ ಹೋಗಿರುವ ಘಟನೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಅಮಾನವೀಯ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಸ್ತೆ ಬದಿಯಲ್ಲಿ ಶಿಶು ಬಿದ್ದಿರುವುದನ್ನು ಕಂಡ ಗ್ರಾಮಸ್ಥರು ಆಘಾತಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶಿಶುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.