ಬೀದರ್ | ಸನ್ಮಿತ್ರ ಯೋಜನೆ ಅಡಿಯಲ್ಲಿ ಕಾರ್ಯಾಚರಣೆ : 17 ಮಂದಿ ಪತ್ತೆ; ಪ್ರಕರಣ ದಾಖಲು
ಬೀದರ್ : ಜಿಲ್ಲೆಯನ್ನು ಮಾದಕ ದ್ರವ್ಯ ಮುಕ್ತ ಜಿಲ್ಲೆಯಾಗಿಸಲು ಗಾಂಜಾ, ಇತರೆ ಮಾದಕ ವಸ್ತು, ದ್ರವ್ಯ ಸೇವನೆ ಮಾಡಿದ ಒಟ್ಟು 17 ಜನರನ್ನು ಸನ್ಮಿತ್ರ ಯೋಜನೆ ಅಡಿಯಲ್ಲಿಕಾರ್ಯಾಚರಣೆ ನಡೆಸಿ ಪತ್ತೆ ಮಾಡಲಾಗಿದ್ದು, ಈ ಕುರಿತು ಒಟ್ಟು 15 ಪ್ರಕರಣಗಳನ್ನು ದಾಖಲಿಸಲಾಗಿದೆ.
ಗಾಂಧಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 11 ಮಂದಿಯನ್ನು ವಶಕ್ಕೆ ಪಡೆದು 11 ಪ್ರಕರಣಗಳು ದಾಖಲಿಸಲಾಗಿದೆ. ನೂತನ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಭಾಲ್ಕಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂವರು ವ್ಯಸನಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಹುಮನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಬ್ಬನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಸನ್ಮಿತ್ರ ಯೋಜನೆ ಅಡಿಯಲ್ಲಿ ಒಟ್ಟು 17 ಜನರನ್ನು ವಶಕ್ಕೆ ಪಡೆದು ಅವರನ್ನು ವೈದ್ಯಕೀಯ ಚಿಕಿತ್ಸೆ ಹಾಗೂ ಮಾನಸಿಕ ಚಿಕಿತ್ಸೆಗಾಗಿ ಸೂಕ್ತ ಸಮಾಲೋಚನೆಗೆ ಕಳುಹಿಸಲಾಗಿದೆ. ಇವರ ಮೇಲೆ ಮುಂದಿನ ದಿನಗಳಲ್ಲಿ ನಿಗಾ ವಹಿಸಲಾಗುವುದು. ಮಾದಕ ದ್ರವ್ಯ, ಗುಳಿಗೆ ಸೇವನೆ ಮಾಡುವ ವ್ಯಸನಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಪ್ರದೀಪ್ ಗುಂಟಿ ಎಚ್ಚರಿಕೆ ನೀಡಿದ್ದಾರೆ.