Bidar | ತಿಂಗಳಲ್ಲಿ 10 ಸಾವಿರ ಸಸಿ ನೆಡಲು ನಿರ್ಧಾರ : ಡಾ.ಅಬ್ದುಲ್ ಖದೀರ್
ಬಿಎನ್‍ಎಸ್‍ಎಸ್‍ನಿಂದ ಹಸಿರು ಬೀದರ್ ಚಳವಳಿ
ಬೀದರ್: ನಗರವನ್ನು ಹಸಿರೀಕರಣಗೊಳಿಸುವ ಉದ್ದೇಶದಿಂದ ಬೀದರ್ ನಾಗರಿಕ ಸನ್ಮಾರ್ಗ ಸಮಿತಿ (ಬಿಎನ್‌ಎನ್‌ಎಸ್), ಜಿಲ್ಲಾ ಆಡಳಿತ ಹಾಗೂ 100ಕ್ಕೂ ಹೆಚ್ಚು ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ‘ಹಸಿರು ಬೀದರ್ ಚಳವಳಿ’ಗೆ ಶುಕ್ರವಾರ ಚಾಲನೆ ನೀಡಲಾಯಿತು. ‘ಒಂದು ಗಿಡ–ಒಂದು ಪೀಳಿಗೆ’ ಘೋಷವಾಕ್ಯದಡಿ ನಡೆಯುವ ಈ ಅಭಿಯಾನದ ಅಂಗವಾಗಿ ಒಂದು ತಿಂಗಳೊಳಗೆ ನಗರದಲ್ಲಿ 10 ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದರು.
ನಗರದ ಶಹಾಪುರ್ ಗೇಟ್ ಸಮೀಪದ ಶಾಹೀನ್ ಶಿಕ್ಷಣ ಸಂಸ್ಥೆ ಸಮೂಹದ ಸಭಾಂಗಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಹಾಗೂ ಹಸಿರು ಬೀದರ್ ಚಳವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಸ್ತೆ ಬದಿ, ಖಾಲಿ ಜಾಗಗಳು ಹಾಗೂ ಸಾರ್ವಜನಿಕ ಉದ್ಯಾನಗಳಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಗುವುದು ಎಂದರು.
ಸಸಿ ನೆಡುವವರನ್ನು ಉತ್ತೇಜಿಸುವ ಸಲುವಾಗಿ ನಗರದ ಎಂಟು ಸ್ಥಳಗಳಲ್ಲಿ ತಾತ್ಕಾಲಿಕ ಸಸಿ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ. ಸಮಿತಿ ಖರೀದಿಸಿದ ಸಸಿಗಳನ್ನು ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ನೀಡಲಾಗುತ್ತಿದ್ದು, ಟ್ರೀ ಗಾರ್ಡ್‌ಗಳೂ ಲಭ್ಯವಿರಲಿವೆ ಎಂದು ಹೇಳಿದರು.
ಹಸಿರು ಬೀದರ್ ಚಳವಳಿಗಾಗಿ ವಿಶೇಷ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದ್ದು, ಸಸಿ ನೆಟ್ಟು ಅದರ ಬೆಳವಣಿಗೆಯ ಛಾಯಾಚಿತ್ರಗಳನ್ನು ಅಪ್‌ಲೋಡ್ ಮಾಡುವವರಿಗೆ ಇ-ಪ್ರಮಾಣ ಪತ್ರ, ವಿಶೇಷ ಉಡುಗೊರೆ ಹಾಗೂ ‘ಪರಿಸರ ರಕ್ಷಕ’ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸಾರ್ವಜನಿಕ ಉದ್ಯಾನಗಳ ಅಭಿವೃದ್ಧಿ, ಸ್ಥಳೀಯ ಸಮಿತಿಗಳ ರಚನೆ, ತೆರೆದ ಜಿಮ್ ಅಳವಡಿಕೆ ಹಾಗೂ ಮಹಿಳೆಯರಿಗಾಗಿ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರೀನ್ ಇಂಡಿಯಾ ಪ್ರೊಜೆಕ್ಟ್ ಸಂಸ್ಥೆಯ ಅಧ್ಯಕ್ಷ ಸರ್ದಾರ್ ಮನ್‌ಮೀತ್ ಸಿಂಗ್, ಭವಿಷ್ಯದಲ್ಲಿ ಲಕ್ಷಾಂತರ ಸಸಿಗಳ ಮೂಲಕ ‘ಬೀದರ್’ ಎಂಬ ಹೆಸರನ್ನು ಹಸಿರಿನಲ್ಲಿ ಅರಳಿಸುವ ಕನಸು ಹೊಂದಿರುವುದಾಗಿ ತಿಳಿಸಿದರು. ಸಾರ್ವಜನಿಕರ ಸಹಕಾರದಿಂದ ದೇಶಾದ್ಯಂತ ಐದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿರುವುದಾಗಿ ಹೇಳಿದ ಅವರು, ಪ್ರತಿಯೊಬ್ಬರೂ ಒಂದು ಸಸಿ ನೆಟ್ಟರೆ ಮುಂದಿನ ಐದು ವರ್ಷಗಳಲ್ಲಿ ಬೀದರ್ ಸಂಪೂರ್ಣ ಹಸಿರಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಯರಡೋನಿ, ವಲಯ ಅರಣ್ಯಾಧಿಕಾರಿ ಶಿವಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೀರೇಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಚನಶೆಟ್ಟಿ, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಹಾವಶೆಟ್ಟಿ ಪಾಟೀಲ್, ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯ ಪ್ರಧಾನ ಕಾಯದರ್ಶಿ ಅಶೋಕ್ ವಡಗಾವೆ, ಟ್ರಸ್ಟಿಗಳಾದ ವೀರೇಶ್ ಖೇಳಗಿ, ರಫಿಕ್ ಸಾಬ್ ಗಾದಗಿ, ಡಾ. ರಾಜಶೇಖರ್ ಸೇಡಂಕರ್, ಡಾ. ಶ್ವೇತಾ ಪಾಟೀಲ್ ಹಾಗೂ ಪ್ರಾಚಾರ್ಯ ಖಾಜಾ ಪಟೇಲ್ ಸೇರಿದಂತೆ ಮತ್ತಿತರರು ಇದ್ದರು.