ಹುಲಸೂರು: ಸಂಸಾರದ ಬಂಧನ, ಬದುಕಿನ ಜಂಜಾಟ ಹಾಗೂ ಸಮಾಜದಲ್ಲಿನ ರಾಗದ್ವೇಷಗಳ ನಡುವೆ ಮನುಷ್ಯನಿಗೆ ಸನ್ಮಾರ್ಗ ತೋರಿಸುವ ದಾರಿದೀಪಗಳಾಗಿ ಮಠಗಳು ಕಾರ್ಯನಿರ್ವಹಿಸುತ್ತಿವೆ. ಮಠಗಳು ಕೇವಲ ಧಾರ್ಮಿಕ ಆಚರಣೆಗಳ ಕೇಂದ್ರಗಳಾಗಿರದೆ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಜ್ಞಾನ ದಾಸೋಹ ನೀಡುತ್ತಿವೆ. ಉತ್ತಮ ನಾಗರಿಕರನ್ನು ರೂಪಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿವೆ ಎಂದು ಮೈಸೂರಿನ ಶ್ರೀಮದ್ ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಹೇಳಿದರು.

ಪಟ್ಟಣದ ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಅವರ 75ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿರುವ ಅಮೃತ ಮಹೋತ್ಸವದ ನಿಮಿತ್ತ ಭಾನುವಾರ ಅಲ್ಲಮಪ್ರಭು ಶೂನ್ಯಪೀಠ ಅನುಭವ ಮಂಟಪದ ಮಹಾದ್ವಾರಗಳನ್ನು ಉದ್ಘಾಟಿಸಿ, ಡಾ. ಸೋಮನಾಥ ಯಾಳವಾರ ರಚಿಸಿರುವ ‘ಬಸವನ ಬೆಳಕೇ ಎಲ್ಲಾಡಿ ಬಂದೆ’ ತ್ರಿಪದಿ ಕಾವ್ಯ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕೂಡಲಸಂಗಮ ಮತ್ತು ಬಸವಕಲ್ಯಾಣ ಕ್ಷೇತ್ರಗಳಿಗೆ ಅವಿನಾಭಾವ ಸಂಬಂಧವಿದೆ. ಹುಲಸೂರಿನಲ್ಲಿ ಅಲ್ಲಮಪ್ರಭು ದೇವರು ಅನುಷ್ಠಾನ ಮಾಡಿದ ನೆಲೆ ಇರುವುದರಿಂದ ಈ ಭಾಗವು ಶರಣರ ಸಂಚಾರದಿಂದ ಪುನೀತವಾಗಿದೆ. ಶರಣರ ವಿಚಾರಧಾರೆ ಹಾಗೂ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು.

ಶಾಸಕ ಶರಣು ಸಲಗರ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯ ಅಭಾವದಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಬೀದರ್, ಕಲಬುರಗಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಭಾಗದ ಜನರ ನೆರವಿಗೆ ರಾಜ್ಯ ಸರ್ಕಾರ ಮುಂದಾಗುವಂತೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟು, ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸಹಕರಿಸಬೇಕು ಎಂದು ದೇಶಿಕೇಂದ್ರ ಮಹಾಸ್ವಾಮಿಗಳಿಗೆ ಮನವಿ ಮಾಡಿದರು.

ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಮಾತನಾಡಿ, ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಶಿಕ್ಷಣ ದಾಸೋಹಿಗಳು ಹಾಗೂ ಮಾತೃ ಹೃದಯದ ಪೂಜ್ಯರಾಗಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿರುವ ಅವರು ತಮ್ಮ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಠಕ್ಕೆ ಆಗಮಿಸಿರುವುದು ಸಂತಸ ತಂದಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ವಿಭಾಗೀಯ ಅಧಿಕಾರಿ ಸಾವಿತ್ರಿ ಸಲಗರ್, ಉದ್ಯಮಿ ಚನ್ನಬಸವ ಬಳತೆ, ಮುದಗಲ್ ಮಠದ ಮಹಾಂತ ಸ್ವಾಮೀಜಿ, ಸಾಯಗಾಂವ್ ಗುರು ಬಸವೇಶ್ವರ ಮಠದ ಶಿವಾನಂದ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಶಂಭುಲಿಂಗ್ ಕಾಮಣ್ಣ, ಮಲ್ಲಮ್ಮ ಪಾಟೀಲ್, ವಚನ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ರಾಜಕುಮಾರ್ ತೊಂಡಾರೆ, ಜಾನಪದ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಶಿವರಾಜ್ ಖಫಲೆ, ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಪ್ರವೀಣ್ ಕಾಡಾದಿ, ಬಸವಕೇಂದ್ರದ ತಾಲೂಕು ಅಧ್ಯಕ್ಷ ಆಕಾಶ್ ಖಂಡಾಳೆ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷೆ ಶ್ರೀದೇವಿ ನಿಡೋದೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ಗಾಯಕ್ವಾಡ್, ರಾಜಕುಮಾರ್ ನಿಡೋದೆ, ಶಶಿಕಲಾ ಪಟ್ನೆ, ಓಂಕಾರ್ ಪಟ್ನೆ, ಅರವಿಂದ್ ಹರಿಪಲೆ ಹಾಗೂ ನಾಗೇಶ್ ಮೇತ್ರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor