ಹುಲಸೂರು: ಹಲವು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರೂ ಪರಿಹಾರ ದೊರೆತಿಲ್ಲ. ಗ್ರಾಮಗಳಿಗೆ ಸಮರ್ಪಕ ಬಸ್ ಸಂಪರ್ಕವೂ ಇಲ್ಲ. ಹೀಗಾಗಿ ಜನರು ನಿತ್ಯ ತೊಂದರೆ ಅನುಭವಿಸುವಂತಾಗಿದೆ ಎಂದು ಮಿರಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಶನಿವಾರ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಮಿರಕಲ್ ಗ್ರಾಮದ ಗ್ರಾಮ ದೇವತೆ ಮೌವಲಿ ದೇವಸ್ಥಾನದ ಆವರಣದಲ್ಲಿ ಬೀದರ್ ಜಿಲ್ಲಾ ಪಂಚಾಯಿತಿ ಹಾಗೂ ಹುಲಸೂರು ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಮಹಾತ್ಮ ಗಾಂಧಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನದಲ್ಲಿ ಗ್ರಾಮಸ್ಥರು ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಮಿರಕಲ್, ಆನಂದವಾಡಿ, ಕೊಟಮಾಳ, ವಾಂಜರವಾಡಿ, ಹನುಮಂತವಾಡಿ ಹಾಗೂ ಅಂಬೇವಾಡಿ ಗ್ರಾಮಗಳಲ್ಲಿ ಸಮರ್ಪಕ ಕುಡಿಯುವ ನೀರಿನ ಸರಬರಾಜು ಇಲ್ಲದೆ ಜನರು ಪರದಾಡುತ್ತಿದ್ದಾರೆ. ಈ ಕುರಿತು ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಜಮ್ಮು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನಾಲ್ಕು ದಿನಗಳ ಕಾಲಾವಕಾಶ ನೀಡುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಮಿರಕಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಹುಲಸೂರು ತಾಲ್ಲೂಕಿಗೆ ಸೇರಿದ್ದರೂ ತಾಲ್ಲೂಕು ಕೇಂದ್ರಕ್ಕೆ ನೇರ ಬಸ್ ಸಂಪರ್ಕವಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹುಲಸೂರು ಸುಮಾರು 10 ಕಿ.ಮೀ. ದೂರದಲ್ಲಿದ್ದರೂ ಬಸ್ ಸೌಲಭ್ಯವಿಲ್ಲದ ಕಾರಣ ಬಸವಕಲ್ಯಾಣದ ಮೂಲಕ ಸುತ್ತು ಬಳಸಿ ಸಂಚರಿಸಬೇಕಾದ ಅನಿವಾರ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸಿದರು.
ಬಸವಕಲ್ಯಾಣದಿಂದ ಗೌರ್, ಆನಂದವಾಡಿ, ಕೊಟಮಾಳ ಹಾಗೂ ವಾಂಜರವಾಡಿ ಗ್ರಾಮಗಳಿಗೆ ಶಾಲಾ ಮಕ್ಕಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಸ್ ಘಟಕದ ವ್ಯವಸ್ಥಾಪಕರು, ಗ್ರಾಮಸ್ಥರ ಬೇಡಿಕೆಯಂತೆ ಶೀಘ್ರದಲ್ಲೇ ಹುಲಸೂರು ತಾಲ್ಲೂಕಿಗೆ ಬಸ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
172 ಅರ್ಜಿ ಸ್ವೀಕಾರ, ವಿಲೇವಾರಿ ಶೂನ್ಯ: ಆಂದೋಲನದಲ್ಲಿ ಮಾಶಾಸನ, ವಿಕಲಚೇತನರ ಮಾಶಾಸನ, ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ಪಡಿತರ ಚೀಟಿಗೆ ಸಂಬಂಧಿಸಿದ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾದವು. ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳಿಗೆ ಸಂಬಂಧಿಸಿದಂತೆಯೂ ಸಾರ್ವಜನಿಕರು ಅರ್ಜಿಗಳು ಹಾಗೂ ದೂರುಗಳನ್ನು ಸಲ್ಲಿಸಿದರು.
ತಹಶೀಲ್ದಾರ್ ಕಚೇರಿ ನೀಡಿರುವ ಇಲಾಖೆವಾರು ಮಾಹಿತಿಯ ಪ್ರಕಾರ, ಆಂದೋಲನದಲ್ಲಿ ಒಟ್ಟು 172 ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ ಕಂದಾಯ ಇಲಾಖೆಗೆ ಅತಿ ಹೆಚ್ಚು 161 ಅರ್ಜಿಗಳು ಸಲ್ಲಿಕೆಯಾಗಿದ್ದು, ಗ್ರಾಮ ಪಂಚಾಯಿತಿಗೆ 8, ಜೆಸ್ಕಾಂಗೆ 2 ಹಾಗೂ ಕೆಎಸ್ಆರ್ಟಿಸಿಗೆ ಒಂದು ಅರ್ಜಿ ಸಲ್ಲಿಕೆಯಾಗಿದೆ. ಆದರೆ ಸ್ವೀಕೃತವಾದ ಯಾವುದೇ ಅರ್ಜಿ ವಿಲೇವಾರಿಯಾಗಿಲ್ಲ. ಎಲ್ಲ 172 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಜಮ್ಮು, ಉಪ ತಹಶೀಲ್ದಾರ್ ಸುನೀಲಕುಮಾರ್ ಸಜ್ಜನಶೆಟ್ಟಿ, ಕೃಷಿ ಅಧಿಕಾರಿ ಆಕಾಶ್, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಡಿ. ಪಾಟೀಲ್, ಅಂಗನವಾಡಿ ಮೇಲ್ವಿಚಾರಕಿ ಶ್ರೀದೇವಿ ಬಿರಾದಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾರುದ್ರಪ್ಪ ಭರಮಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.