ಹುಮನಾಬಾದ್ | ಚಿತ್ತಕೋಟಾ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಲು ಮನವಿ
ಹುಮನಾಬಾದ್: ತಾಲೂಕಿನ ಚಿತ್ತಕೋಟಾ ಗ್ರಾಮಕ್ಕೆ ಸಮರ್ಪಕ ಬಸ್ ಸೌಲಭ್ಯ ಒದಗಿಸುವಂತೆ ಡಿಎಸ್ಎಸ್ (ಅಂಬೇಡ್ಕರ್‌ವಾದ) ಸಂಘಟನೆ ಆಗ್ರಹಿಸಿದೆ.
ಈ ಕುರಿತು ಹುಮನಾಬಾದ್ ಬಸ್ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿರುವ ಸಂಘಟನೆ, ಗ್ರಾಮಕ್ಕೆ ನಿಯಮಿತ ಬಸ್ ಸೇವೆ ಇಲ್ಲದ ಕಾರಣ ವಿದ್ಯಾರ್ಥಿಗಳು, ರೈತರು, ಉದ್ಯೋಗಸ್ಥರು ಹಾಗೂ ಸಾರ್ವಜನಿಕರು ದಿನನಿತ್ಯ ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದೆ.
ಶಾಲೆ-ಕಾಲೇಜು, ಆಸ್ಪತ್ರೆ ಹಾಗೂ ಸರ್ಕಾರಿ ಕಚೇರಿಗಳಿಗೆ ತೆರಳುವವರಿಗೆ ಸೂಕ್ತ ಸಾರಿಗೆ ವ್ಯವಸ್ಥೆಯ ಕೊರತೆಯಿಂದ ಅನಾನುಕೂಲ ಉಂಟಾಗುತ್ತಿದೆ. ಹೀಗಾಗಿ ಚಿತ್ತಕೋಟಾ ಗ್ರಾಮಕ್ಕೆ ಪ್ರತಿದಿನ ನಿಯಮಿತ ಹಾಗೂ ನಿಗದಿತ ವೇಳಾಪಟ್ಟಿಯ ಬಸ್ ಸೇವೆ ಆರಂಭಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಗ್ರಾಮಕ್ಕೆ ಬಸ್‌ಗಳು ಸರಿಯಾದ ಸಮಯಕ್ಕೆ ಬಾರದ ಕಾರಣ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹಾಗೂ ಉದ್ಯೋಗಸ್ಥರು ಕೆಲಸದ ಸ್ಥಳಗಳಿಗೆ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಸಂಘಟನೆ ತಿಳಿಸಿದೆ.
ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಿದ್ದರೂ, ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಬಸ್‌ಗಳೇ ಬಾರದಿದ್ದರೆ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವುದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ ಎಂದು ಡಿಎಸ್ಎಸ್ ಮುಖಂಡರು ಹೇಳಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಚಿತ್ತಕೋಟಾ ಗ್ರಾಮಕ್ಕೆ ಸಮರ್ಪಕ ಬಸ್ ಸೇವೆ ಆರಂಭಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಡಿಎಸ್ಎಸ್ ತಾಲೂಕು ಸಂಚಾಲಕ ರಾಹುಲ್ ಉದ್ದಾ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಿದ್ದಾರ್ಥ್ ಕಾಂಬಳೆ, ವಿದ್ಯಾಸಾಗರ್ ಸಾದನೂರ್, ಅಲಿಸಾಬ್ ಮಚಕೂರಿ, ರೇವಪ್ಪ ಡಾಗೆ, ಭೀಮರಾವ್ ಹಂಗರಗಿ, ಭಾರತಬಾಯಿ, ಸುವರ್ಣಾ, ಭೀಮಣ್ಣ ಡಾಗೆ, ಮಲ್ಲಮ್ಮ, ಶಾರದಬಾಯಿ, ಜಗದೇವಿ, ಶಶಿಕಲಾ, ಕಾಶಾಮ್ಮ ಹಾಗೂ ಗೀತಾಬಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.