ಹುಮನಾಬಾದ್ | ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ
ಹುಮನಾಬಾದ್: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದವಾನಿಯ ರಾಮಲೀಲಾ ಮೈದಾನದಲ್ಲಿ ಆ.8ರಂದು ಭಾಷಣ ಮಾಡಿದ ಸ್ಥಳವನ್ನು ಆ.10ರಂದು ಹವನದ ಮೂಲಕ ಶುದ್ಧೀಕರಣ ಮಾಡಿರುವ ಘಟನೆ ಖಂಡಿಸಿ ಮಾಜಿ ಸಚಿವ ರಾಜಶೇಖರ್ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಹಳೆ ತಹಸೀಲ್ದಾರ್ ಕಚೇರಿಯಿಂದ ಆರಂಭವಾದ ಪ್ರತಿಭಟನಾ ರ‍್ಯಾಲಿಯು ಮುಖ್ಯ ರಸ್ತೆಯ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ನಡೆಯಿತು. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ರಾಜಶೇಖರ್ ಪಾಟೀಲ್, 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಂತಹ ಘಟನೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ ಎಂದು ಆರೋಪಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ಕಾರ್ಮಿಕರ ಪರವಾಗಿ ಸಚಿವರು ಏನು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟ ನಾಯಕ ಖರ್ಗೆ. ಇಂತಹ ಹಿರಿಯ ನಾಯಕನ ವಿರುದ್ಧ ಅವಮಾನಕರ ಕೃತ್ಯ ಎಸಗಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಸಂದರ್ಭದಲ್ಲಿ ಪಾಕಿಸ್ತಾನ, ಜಮ್ಮು-ಕಾಶ್ಮೀರದಂತಹ ವಿಷಯಗಳನ್ನು ಪ್ರಸ್ತಾಪಿಸಿ ಜನರ ಗಮನವನ್ನು ಬೇರೆಡೆ ಸೆಳೆಯುವ ಬಿಜೆಪಿ, ಅಧಿಕಾರಕ್ಕೆ ಬಂದ ಬಳಿಕ ಇಂತಹ ಕಿಡಿಗೇಡಿಗಳಿಗೆ ಆಸ್ಪದ ನೀಡುತ್ತಿದೆ ಎಂದು ಆರೋಪಿಸಿದರು.
ಈ ಘಟನೆ ಖರ್ಗೆ ಅವರಿಗಷ್ಟೇ ಅಲ್ಲ, ದೇಶದ 140 ಕೋಟಿ ಜನರಿಗೆ ಮಾಡಿದ ಅವಮಾನವಾಗಿದೆ. ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜಶೇಖರ್ ಪಾಟೀಲ್ ಒತ್ತಾಯಿಸಿದರು.
ನಂತರದಲ್ಲಿ ತಹಶೀಲ್ದಾರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ್ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದ್ ಅರಳಿ, ಕಾಂಗ್ರೆಸ್ ಸಹಕಾರ ವಿಭಾಗದ ರಾಜ್ಯಧ್ಯಕ್ಷ ಧನರಾಜ್ ತಾಳಂಪಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಫ್ಸರ್ ಮೋಹಿಯೋದ್ದಿನ್, ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ರಮೇಶ್ ಡಾಕುಳಗಿ, ಯುವ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ಜಮಗಿ, ಗ್ರಾಮೀಣ ಅಧ್ಯಕ್ಷ ಓಂಕಾರ್ ತುಂಬಾ, ಪ್ರಮುಖರಾದ ಲಕ್ಷ್ಮಿಪುತ್ರ ಮಾಳಗೆ, ವಿಜಯಕುಮಾರ್ ನಾತೆ, ಮಲ್ಲಿಕಾರ್ಜುನ್ ಮಹಿಂದ್ರಕುಮಾರ್ ಹಾಗೂ ವೀರಪ್ಪ ಧೂಮ್ಮನ್ಸೂರ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.