×
Ad

ಬೀದರ್‌ನಲ್ಲಿ ಸಚಿವ ಯು.ಟಿ.ಖಾದರ್ ಅವರಿಂದ ಪೀಪಲ್ಸ್ ಹೀಲಿಂಗ್ ಟ್ರಿ ಆಸ್ಪತ್ರೆ ಉದ್ಘಾಟನೆ

ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಲಿ: ಸಚಿವ ಯು.ಟಿ.ಖಾದರ್

Update: 2026-07-08 22:15 IST

ಬೀದರ್: ನಗರದ ನೆಹರು ಕ್ರೀಡಾಂಗಣ ಸಮೀಪ ನಿರ್ಮಾಣಗೊಂಡಿರುವ ಪೀಪಲ್ಸ್ ಹೀಲಿಂಗ್ ಟ್ರಿ ಆಸ್ಪತ್ರೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಮಂಗಳವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಇದು ಕೇವಲ ಆಸ್ಪತ್ರೆಯ ಉದ್ಘಾಟನೆಯಲ್ಲ, ಯುವಕರಿಗೆ ಪ್ರೇರಣೆ ನೀಡುವ ಮಾದರಿ ಕಾರ್ಯಕ್ರಮವಾಗಿದೆ. ಆಸ್ಪತ್ರೆಯ ಸಿಇಒ ಸಿರಾಜ್, ಡಾ.ಅಬ್ರಾಹರ್ ಹಾಗೂ ಇರ್ಶಾದ್ ಅವರು ತಮ್ಮ ಬದ್ಧತೆ ಮತ್ತು ಪರಿಶ್ರಮದಿಂದ ಉತ್ತಮ ಸಂಸ್ಥೆಯನ್ನು ಕಟ್ಟಿದ್ದು, ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಪ್ರಾಮಾಣಿಕತೆ, ಬದ್ಧತೆ ಹಾಗೂ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ದೇಶದಲ್ಲಿ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ ಎಂಬುದನ್ನು ಈ ಮೂವರು ಯುವಕರು ತೋರಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಸ್ಪತ್ರೆಯಲ್ಲಿ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿ (ಆಪರೇಷನ್ ಥಿಯೇಟರ್), ಐಸಿಯು, ಕ್ಯಾಥ್‌ಲ್ಯಾಬ್ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜೊತೆಗೆ ಪರಿಣತ ವೈದ್ಯರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಬೀದರ್ ಜಿಲ್ಲೆಯ ಜನರು ಚಿಕಿತ್ಸೆಗಾಗಿ ಹೈದರಾಬಾದ್, ಬೆಂಗಳೂರು ಸೇರಿದಂತೆ ಇತರ ನಗರಗಳಿಗೆ ತೆರಳುವ ಪರಿಸ್ಥಿತಿ ಇದೆ. ಈ ಆಸ್ಪತ್ರೆಯ ಮೂಲಕ ಜಿಲ್ಲೆಯಲ್ಲೇ ಗುಣಮಟ್ಟದ ಆರೋಗ್ಯ ಸೇವೆ ದೊರೆಯಲಿದ್ದು, ಮುಂದಿನ ದಿನಗಳಲ್ಲಿ ಇದು ದೊಡ್ಡ ಮಟ್ಟದ ಆರೋಗ್ಯ ಸಂಸ್ಥೆಯಾಗಿ ಬೆಳೆಯಲಿದೆ ಎಂದು ಸಚಿವ ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ರಹೀಮ್ ಖಾನ್, ಡಾ. ಶೈಲೇಂದ್ರ ಬಿಲ್ದಾಳೆ, ಶಾಹಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದಿರ್, ಪೀಪಲ್ಸ್ ಹೀಲಿಂಗ್ ಟ್ರಿ ಆಸ್ಪತ್ರೆಯ ಸಿಇಒ ಸಿರಾಜ್, ಡಾ.ಅಬ್ರಾಹರ್ ಮತ್ತು ಇರ್ಶಾದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News