ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಹುಮನಾಬಾದ್‌ನಲ್ಲಿ ಪ್ರತಿಭಟನೆ
ಹುಮನಾಬಾದ್ : ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ, ಎನ್‌ಟಿಎ ರದ್ದುಪಡಿಸಲು ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಾಗೂ ಎಸ್‌ಎಫ್‌ಐ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳೊಂದಿಗೆ ನಗರದ ರಾಮಚಂದ್ರ ವೀರಪ್ಪ ವೃತ್ತದಿಂದ ಮುಖ್ಯರಸ್ತೆ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ನಂತರ ತಹಸೀಲ್ದಾರ್ ಮುಖಾಂತರ ಪ್ರಧಾನಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ, ಮೇ 3ರಂದು ನಡೆದ ನೀಟ್ ಪರೀಕ್ಷೆಯನ್ನು ದೇಶದಾದ್ಯಂತ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದರು. ಆದರೆ ಪ್ರಶ್ನೆಪತ್ರಿಕೆ ರಾಜಸ್ಥಾನ ಸೇರಿದಂತೆ ಹಲವು ಕಡೆಗಳಲ್ಲಿ ಸೋರಿಕೆಯಾಗಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿದಿದೆ ಎಂದು ದೂರಲಾಗಿದೆ.
ಕೇಂದ್ರ ಸರ್ಕಾರದ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆ, ದುರ್ಬಲ ಆಡಳಿತ ಹಾಗೂ ಭ್ರಷ್ಟಾಚಾರದ ಪರಿಣಾಮವಾಗಿ ಪರೀಕ್ಷಾ ಮಾಫಿಯಾಗಳು ಬೆಳೆಯುತ್ತಿವೆ. ಇದರಿಂದ ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡ, ಆರ್ಥಿಕ ಹೊರೆ ಹಾಗೂ ಅನಿಶ್ಚಿತತೆ ಹೆಚ್ಚುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ರಾಹುಲ್ ಉದ್ದಾ ಮಾತನಾಡಿ, “ಲಕ್ಷಾಂತರ ವಿದ್ಯಾರ್ಥಿಗಳು ವರ್ಷಪೂರ್ತಿ ಕಠಿಣ ಪರಿಶ್ರಮದಿಂದ ಪರೀಕ್ಷೆಗೆ ಸಿದ್ಧತೆ ನಡೆಸಿದರೂ, ಪ್ರಶ್ನೆಪತ್ರಿಕೆ ಸೋರಿಕೆಯಂತಹ ಅಕ್ರಮಗಳಿಂದ ಅವರ ಪರಿಶ್ರಮ ವ್ಯರ್ಥವಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು. ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು. ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಲು ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅನ್ನು ರದ್ದುಪಡಿಸಿ ಪಾರದರ್ಶಕ ಮತ್ತು ವಿಶ್ವಾಸಾರ್ಹ ಹೊಸ ಪರೀಕ್ಷಾ ವ್ಯವಸ್ಥೆ ರೂಪಿಸಬೇಕು. ಪರೀಕ್ಷಾ ಅಕ್ರಮಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಡಿ ವೈ ಎಫ್ ಐ ಜಿಲ್ಲಾ ಸಂಚಾಲಕ ಶಶಿಕಾಂತ್ ಡಾಂಗೆ, ಎಸ್ ಎಫ್ ಐ ಜಿಲ್ಲಾ ಸಂಚಾಲಕ ಸಯ್ಯದ್ ಮೀರಾಜೋದ್ದಿನ್, ತಾಲೂಕು ಸಂಚಾಲಕ ಸುಮಿತ್ ಡಾಂಗೆ, ಕಟ್ಟಡ ಕಾರ್ಮಿಕ ಸಂಘಟನೆಯ ತಾಲೂಕಾಧ್ಯಕ್ಷ ಗೌಸೋದ್ದಿನ್, ಸುರೇಶ್ ಘಾಂಗ್ರೆ, ಅಮನ್ ಖಾನ್, ದಲಿತ ಸಂಘರ್ಷ ಸಮಿತಿಯ ಸುಧಾಕರ್ ಸಿಂಧೆ, ಬಲಭೀಮ್ ಸಿಂಧೆ, ಶ್ರೀನಿವಾಸ್ ಕಟ್ಟಿಮನಿ, ಮೋಹನ್ ಬೀರನಳ್ಳಿ, ತುಕಾರಾಮ್ ಮುಸ್ತಾಪೂರೆ, ನೀಲಕಂಠ್ ಶೆಟ್ಟಿ, ವಿನೋದ್ ಮೇಲಕೇರಿ, ಅಮರ್ ಉತ್ತಮ್, ಬಕ್ಕಪ್ಪಾ ಇಂದಿರಾನಗರ್, ವಿದ್ಯಾರ್ಥಿ ಘಟಕ ಸಂಚಾಲಕರಾದ ಅವಿನಾಶ್ ಗಾಯಕವಾಡ್, ಚಂದ್ರಶೇಖರ್ ಮಾಲೆ, ತಾಲೂಕಾ ಸಮಿತಿ
ಸದಸ್ಯರಾದ ಪ್ರಕಾಶ್ ಗಡವಂತಿ, ಸಂತೋಷ್ ಅತಿವಾಳ್ ಹಾಗೂ ರಾಹುಲ್ ಹಾಲಗೊರ್ಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.