ಉತ್ತರ, ಕಲ್ಯಾಣ ಕರ್ನಾಟಕದ ಬರಪೀಡಿತ ರೈತರಿಗೆ ಪ್ರತೀ ಎಕರೆಗೆ 50,000 ರೂ. ಪರಿಹಾರ ನೀಡಲು ವಿಜಯೇಂದ್ರ ಆಗ್ರಹ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಬೀದರ್, ಜು.13: ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಬರಪೀಡಿತ ರೈತರ ಬಗ್ಗೆ ರಾಜ್ಯ ಕಾಂಗ್ರೆಸ್ ಸರಕಾರ ತೀವ್ರ ನಿರ್ಲಕ್ಷ್ಯ ತೋರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೇವಲ ಶೇ.12ರಷ್ಟು ಮಳೆಯಾಗಿದ್ದು, ಪರಿಸ್ಥಿತಿ ತೀರಾ ಹದಗೆಟ್ಟಿದೆ. ಆದ್ದರಿಂದ ಕೃಷಿ ವಲಯಕ್ಕೆ ತಕ್ಷಣವೇ ಆರ್ಥಿಕ ನೆರವು ನೀಡಬೇಕೆಂದು ಆಗ್ರಹಿಸಿದರು.
"ಮಳೆ ಕೈಕೊಟ್ಟ ಕಾರಣ ಈ ಭಾಗದಲ್ಲಿ 30 ಲಕ್ಷ ರೂ.ಗೂ. ಹೆಚ್ಚು ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆಯೇ ಆಗದೆ ರೈತರು ಪರದಾಡುತ್ತಿದ್ದಾರೆ. ತೊಗರಿ, ಸೂರ್ಯಕಾಂತಿ ಮತ್ತು ಹತ್ತಿಯಂತಹ ಪ್ರಮುಖ ಬೆಳೆಗಳನ್ನು ಬಿತ್ತನೆ ಮಾಡಲು ಸಾಧ್ಯವಾಗದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ" ಎಂದು ಹೇಳಿದರು.
ಮುಖ್ಯಮಂತ್ರಿಯ ಭೇಟಿಗೆ ಟೀಕೆ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಇತ್ತೀಚಿನ ಬಸವ ಕಲ್ಯಾಣ ಭೇಟಿಯನ್ನು ಕೇವಲ "ಫೋಟೋ ಶೂಟ್" ಎಂದು ಟೀಕಿಸಿದ ವಿಜಯೇಂದ್ರ, ಸರ್ಕಾರದಿಂದ ತಳಮಟ್ಟದಲ್ಲಿ ಯಾವುದೇ ವಾಸ್ತವಿಕ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು.
ತಕ್ಷಣದ ಪರಿಹಾರಕ್ಕೆ ಆಗ್ರಹ:
ಪ್ರಸಕ್ತ ತೀವ್ರ ಸಂಕಷ್ಟದಲ್ಲಿರುವ ರೈತರ ಕೈಹಿಡಿಯಲು ರಾಜ್ಯ ಸರ್ಕಾರ ತಕ್ಷಣವೇ ಪ್ರತಿ ಎಕರೆಗೆ ಕನಿಷ್ಠ 50,000 ರೂ. ಪರಿಹಾರ ಬಿಡುಗಡೆ ಮಾಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
ಅನುಭವ ಮಂಟಪ ಯೋಜನೆ ನಿರ್ಲಕ್ಷ್ಯ
ಹಿಂದೆ ಬಿ.ಎಸ್.ಯಡಿಯೂರಪ್ಪರ ನೇತೃತ್ವದ ಬಿಜೆಪಿ ಸರಕಾರವು 100 ಕೋಟಿ ರೂ. ಹಾಗೂ 200 ಕೋಟಿ ರೂ.ಗಳನ್ನು ಹಂತ-ಹಂತವಾಗಿ ಬಿಡುಗಡೆ ಮಾಡಿ, ಸುಮಾರು 500 ಕೋಟಿ ರೂ. ವೆಚ್ಚದ ಯೋಜನೆಯನ್ನು ಆರಂಭಿಸಿತ್ತು. ಆದರೆ, ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರಕಾರವು ಜನರ ಒತ್ತಾಯದ ನಡುವೆಯೂ ಈ ಯೋಜನೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ನಿರ್ಲಕ್ಷಿಸಿದೆ ಎಂದು ಆರೋಪಿಸಿದ ವಿಜಯೇಂದ್ರ, ಸಿಎಂ ತಕ್ಷಣವೇ ಬಾಕಿ ಹಣವನ್ನು ಬಿಡುಗಡೆ ಮಾಡಿ, ಇದರ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳ ಶಮನ
ಬೀದರ್ ಜಿಲ್ಲಾ ಬಿಜೆಪಿ ಘಟಕದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಎಲ್ಲಾ ಸ್ಥಳೀಯ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಚರ್ಚಿಸಿ ಬಗೆಹರಿಸಲು ಕೋರ್ ಕಮಿಟಿ ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದರು.