Bidar | ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿ ಆರೋಪ: ಇಬ್ಬರು ರೌಡಿಶೀಟರ್ ಗಳ ಗಡಿಪಾರು
ಬೀದರ್: ಕಾನೂನು ಬಾಹಿರ ಕೆಲಸದಲ್ಲಿ ಭಾಗಿಯಾದ ಆರೋಪದಲ್ಲಿ ಇಬ್ಬರು ರೌಡಿಶೀಟರ್ ಗಳನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಚಿಟಗುಪ್ಪಾ ಪಟ್ಟಣದ ಮಾರ್ಕಂಡೇಶ್ವರ್ ಗಲ್ಲಿಯ ನಿವಾಸಿ ವೀರಣ್ಣಾ ಬರ್ಲಾ ಹಾಗೂ ಜಾಫರ್ ಅಲಿ ಗಡಿಪಾರು ಆದವರು.
ವೀರಣ್ಣಾ ಬರ್ಲಾ ಎಂಬಾತ ಚಿಟಗುಪ್ಪಾ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಮಟ್ಕಾ, ಜೂಜಾಟ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ವೀರಣ್ಣಾ ಬರ್ಲಾನ ಮೇಲೆ ಸುಮಾರು 20 ಪ್ರಕರಣಗಳು ದಾಖಲಾಗಿದ್ದರೂ ಆತ ಸಾರ್ವಜನಿಕರಿಂದ ಹಣ ಪಡೆದು ಓ.ಸಿ ಮಟ್ಕಾ, ಜೂಜಾಟ ಬರೆದುಕೊಂಡು ತನ್ನ ಕಸಬನ್ನಾಗಿ ಮಾಡಿಕೊಂಡಿದ್ದನು. ಆತನು ಅಪರಾಧಿಕ ಕೃತ್ಯಗಳಿಂದ ವಿಮ್ಮುಖನಾಗದೆ ತನ್ನ ಪ್ರವೃತಿಯನ್ನು ಮುಂದುವರೆಸಿಕೊಂಡಿದ್ದನು ಎಂದು ಆರೋಪಿಸಲಾಗಿದೆ. ಸಮಾಜದಲ್ಲಿ ಶಾಂತಿ ಪಾಲನೆ ಮತ್ತು ಕಾನೂನು ಸುವ್ಯವಸ್ಥೆಗಾಗಿ ಆತನನ್ನು ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
ಗಾಂಧಿಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಇರಾನಿ ಕಾಲೋನಿಯ ನಿವಾಸಿಯಾದ ಜಾಫರ್ ಅಲಿ ಎಂಬಾತನು ಬೀದರ್ ಜಿಲ್ಲೆಯಲ್ಲಿ ಸುಲಿಗೆ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಜೀವ ಬೆದರಿಕೆ ಹಾಕುವುದು, ಅಕ್ರಮವಾಗಿ ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುವುದನ್ನು ತನ್ನ ಕಸಬನ್ನಾಗಿಕೊಂಡಿದ್ದನು ಎಂದು ಆರೋಪಿಸಲಾಗಿದೆ. ಈತನ ವಿರುದ್ಧ ಸುಮಾರು 8 ಪ್ರಕರಣಗಳು ದಾಖಲಾಗಿದ್ದರೂ ತನ್ನ ಅಪರಾಧಿಕ ಕೃತ್ಯಗಳಿಂದ ವಿಮ್ಮುಖನಾಗದೆ ತನ್ನ ಪ್ರವೃತಿಯನ್ನು ಮುಂದುವರೆಸಿದ್ದನು ಎಂದು ಆರೋಪಿಸಲಾಗಿದೆ. ಆದ್ದರಿಂದ ಸಮಾಜದಲ್ಲಿ ಶಾಂತಿ ಪಾಲನೆ ಮತ್ತು ಕಾನೂನು ಸುವ್ಯವಸ್ಥೆಗಾಗಿ ಆತನನ್ನು ಬೀದರ್ ಜಿಲ್ಲೆಯಿಂದ ಹಾಸನ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
ಜಿಲ್ಲೆಯಲ್ಲಿ ಕಾನೂನು ವಿರುದ್ಧ ಚಟುವಟಿಕೆಯಲ್ಲಿ ಭಾಗಿಯಾಗಿ, ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಅಡೆತಡೆಯನ್ನುಂಟು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಹಾಗೆಯೇ ಗಡಿಪಾರು ಮಾಡಲಾಗುವುದು. ಆದ್ದರಿಂದ ಜಿಲ್ಲೆಯ ನಾಗರಿಕರು ಯಾವುದೇ ಕಾನೂನು ವಿರುದ್ದ ಚಟುವಟಿಕೆಯಲ್ಲಿ ಭಾಗಿಯಾಗಿ ಕಾನೂನು ಸಂಘರ್ಷದಲ್ಲಿ ಅಮೂಲ್ಯವಾದ ತನ್ನ ಹಾಗೂ ತನ್ನ ಕುಟುಂಬದ ಜೀವನವನ್ನು ಹಾಳುಮಾಡಿಕೊಳ್ಳಬೇಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.