×
Ad

ಮಳೆ ಕೊರತೆ : ಕಲ್ಯಾಣ ಕರ್ನಾಟಕ ಜಿಲ್ಲೆಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ

ಬೆಳೆ ನಷ್ಟಕ್ಕೆ ಎಕರೆಗೆ 25 ಸಾವಿರ ರೂ. ಪರಿಹಾರ ನೀಡುವಂತೆ ವೀರ ಕನ್ನಡಿಗರ ಸೇನೆ ಮನವಿ

Update: 2026-06-29 18:23 IST

ಬೀದರ್: ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳನ್ನು ತಕ್ಷಣವೇ ಬರಪೀಡಿತ ಪ್ರದೇಶಗಳೆಂದು ಘೋಷಿಸಿ, ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿ ವೀರ ಕನ್ನಡಿಗರ ಸೇನೆ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದೆ.

ಮನವಿ ಪತ್ರದಲ್ಲಿ, ಮಳೆ ಕೊರತೆಯಿಂದ ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಜೂನ್ ತಿಂಗಳಲ್ಲಿ ನಿರೀಕ್ಷಿತ ಮಳೆಯಾಗದ ಪರಿಣಾಮ ಶೇ.80ರಷ್ಟು ಪ್ರದೇಶಗಳಲ್ಲಿ ಬಿತ್ತನೆ ಮಾಡಲಾಗಿದ್ದ ತೊಗರಿ, ಸೊಯಾಬೀನ್, ಉದ್ದು ಹಾಗೂ ಹೆಸರು ಬೆಳೆಗಳು ಮೊಳಕೆಯೊಡೆಯದೆ ಸಂಪೂರ್ಣ ನಾಶವಾಗಿವೆ ಎಂದು ತಿಳಿಸಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.60ರಷ್ಟು ಕೆರೆ-ಕಟ್ಟೆಗಳು ಒಣಗಿದ್ದು, ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಬೆಳೆ ನಷ್ಟ ಮತ್ತು ಸಾಲದ ಬಾಧೆಯಿಂದ ರೈತರು, ಕೃಷಿ ಕಾರ್ಮಿಕರು ಹಾಗೂ ಅವರ ಕುಟುಂಬಗಳು ಉದ್ಯೋಗ ಅರಸಿ ಪಟ್ಟಣಗಳು ಮತ್ತು ಇತರ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ರೈತರು ಪ್ರತಿ ಎಕರೆಗೆ 15 ಸಾವಿರ ರೂ. ನಿಂದ 20 ಸಾವಿರ ರೂ. ವರೆಗೆ ಬೀಜ, ಗೊಬ್ಬರ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ವೆಚ್ಚ ಮಾಡಿದ್ದು, ಸಾಲದ ಮೂಲಕ ಕೃಷಿ ನಡೆಸುತ್ತಿರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಅನಾಹುತಗಳು ಸಂಭವಿಸುವ ಆತಂಕವೂ ವ್ಯಕ್ತವಾಗಿದೆ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳನ್ನು ತಕ್ಷಣವೇ ಬರಪೀಡಿತ ಪ್ರದೇಶಗಳೆಂದು ಘೋಷಿಸಿ, ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಬಿಡುಗಡೆ ಮಾಡಬೇಕು. ರೈತರ ಬೆಳೆ ಹಾಗೂ ಕೃಷಿ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಿ, ಹೊಸ ಸಾಲ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.

ಇದೇ ವೇಳೆ, ಮೇವಿನ ಬ್ಯಾಂಕ್‌ಗಳನ್ನು ಸ್ಥಾಪಿಸುವುದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 150 ದಿನಗಳ ಉದ್ಯೋಗವನ್ನು ಜಾರಿಗೊಳಿಸುವುದು ಹಾಗೂ ಬೆಳೆ ವಿಮೆ ಪರಿಹಾರ ಪ್ರಕ್ರಿಯೆಯನ್ನು ಸರಳೀಕರಿಸಿ 30 ದಿನಗಳೊಳಗೆ ಇತ್ಯರ್ಥಪಡಿಸುವಂತೆ ಒತ್ತಾಯಿಸಲಾಗಿದೆ.

ಒಂದು ವೇಳೆ 15 ದಿನಗಳೊಳಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ವೀರ ಕನ್ನಡಿಗರ ಸೇನೆಯ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಡಾ. ಸುಬ್ಬಣ್ಣ ಕರಕನಳ್ಳಿ, ಜಿಲ್ಲಾ ಗೌರವಾಧ್ಯಕ್ಷ ಈಶ್ವರ್ ಬಡಿಗೇರ್, ಜಿಲ್ಲಾಧ್ಯಕ್ಷ ಅಮರ್ ಪೂಜಾರಿ, ಜಿಲ್ಲಾ ಸಂಚಾಲಕ ಅಂಬಾದಾಸ್ ಸೈನೆ, ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ಜಡಗೆ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಗೋವಿಂದ್ ಪೂಜಾರಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮೋಹಿನ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬುರಾವ್ ಕೆ. ಬಿಟ್ಟೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಶಿಧರ್ ಜ್ಯೋತಿ, ತಾಲೂಕಾಧ್ಯಕ್ಷ ಗೌಸೋದ್ದೀನ್ ಯಾಕತಪುರ್, ನಗರಾಧ್ಯಕ್ಷ ಪ್ರಶಾಂತ್ ಹುಗಾರ್, ತಾಲೂಕು ಕಾರ್ಯದರ್ಶಿ ಜುಬೇರ್ ಪಾಶಾ ಹಾಗೂ ಜಿಲ್ಲಾ ಖಜಾಂಚಿ ಕಲ್ಲಪ್ಪ ಚಾಂಬೋಳ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News