×
Ad

ಕನ್ನಡ ಜಗತ್ತನ್ನು ವೈಚಾರಿಕವಾಗಿ ರೂಪಿಸಿದ್ದು ವಚನಕಾರರು : ಬರಗೂರು ರಾಮಚಂದ್ರಪ್ಪ

Update: 2026-01-26 19:20 IST

ಬಸವಕಲ್ಯಾಣ : ಎಪ್ಪತ್ತು ಎಂಬತ್ತರ ದಶಕದ ನಂತರದಲ್ಲಿ ವಚನ ಸಾಹಿತ್ಯಕ್ಕೆ ಸಾಹಿತ್ಯದ ಮನ್ನಣೆ ದೊರೆತಿದೆ. ಅನಂತರದಲ್ಲಿ ವಚನಗಳ ಕುರಿತು ಭಿನ್ನ ಆಯಾಮಗಳಲ್ಲಿ ಅಧ್ಯಯನ ಆರಂಭವಾದವು. ಕನ್ನಡ ಜಗತ್ತನ್ನು ವೈಚಾರಿಕವಾಗಿ ರೂಪಿಸಿದ್ದು ವಚನಕಾರರು ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಹೇಳಿದರು.

ನಗರದ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನಲ್ಲಿ ರವಿವಾರ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಪ್ರತಿಷ್ಠಾನದ 96ನೇ ಉಪನ್ಯಾಸ ಸಮಾರಂಭದಲ್ಲಿ 'ಕನ್ನಡ ಸಾಹಿತ್ಯ: ಸಮಾನತೆ ಮತ್ತು ಸೌಹಾರ್ದತೆ' ವಿಷಯದ ಕುರಿತು ಮಾತನಾಡಿದ ಅವರು, ಬಹುತ್ವ ಹಾಗೂ ಏಕತ್ವಗಳ ಒಂದತ್ವಗಳೆ ಸೌಹಾರ್ದತೆಯಾಗಿದೆ ಎಂದರು.

ವಿವೇಕದ ಜಾಗದಲ್ಲಿ ಉದ್ರೇಕ, ಸತ್ಯದ ಜಾಗದಲ್ಲಿ ಅಸತ್ಯ ಬಂದು ನೆಲೆಸಿವೆ. ವಿಚಾರ ಮತ್ತು ವಿಕಾರಗಳ ನಡುವಿನ ಅಂತರ ಕಡಿಮೆಯಾಗಿದೆ. ಕನ್ನಡ ಸಾಹಿತ್ಯ ಜಾತಿ, ಕುಲ ವ್ಯವಸ್ಥೆಯನ್ನು, ಲಿಂಗ ತಾರತಮ್ಯವನ್ನು ವಿರೋಧಿಸಿದೆ. ಪರಂಪರೆಗೆ ಚಲನಶೀಲತೆ ಇರುತ್ತದೆ. ಸಂಪ್ರದಾಯಕ್ಕೆ ಜಡತೆ ಇರುತ್ತದೆ. ಸಂಸ್ಕೃತಿಯೂ ಏಕ ಕಾಲದಲ್ಲಿ ಚಲನಶೀಲತೆ ಮತ್ತು ಜಡವು ಆಗಿರುತ್ತದೆ ಎಂದು ಹೇಳಿದರು.

ತನ್ನ ಸಮಾಜದ, ದೇಶದ ಸೌಹಾರ್ದತೆಗೆ ಸಮಾನತೆಗೆ ಧಕ್ಕೆ ಬಂದಾಗ ಸಾಹಿತ್ಯವು ಕಾಲದ ದನಿಯಾಗಿದೆ. ಎಲ್ಲರೂ ಕಾಲದ ದನಿಯಾಗುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಕನ್ನಡವನ್ನು ಧರ್ಮ ತಾರತಮ್ಯವಿಲ್ಲದೆ, ಲಿಂಗ ತಾರತಮ್ಯವಿಲ್ಲದೆ, ಜಾತಿ ತಾರತಮ್ಯವಿಲ್ಲದೆ ಕಟ್ಟಲಾಗಿದೆ. ಜೈನರು, ಲಿಂಗಾಯತರು, ಬ್ರಾಹ್ಮಣರು, ಕ್ರೈಸ್ತರು ಎಲ್ಲರು ಕನ್ನಡ ಜಗತ್ತನ್ನು ಕಟ್ಟಿದ್ದಾರೆ. ಹಾಗಾಗಿಯೇ ಕನ್ನಡ ಸಾಹಿತ್ಯ ಎಂದಿಗೂ ಸಮಾನತೆ ಮತ್ತು ಸೌಹಾರ್ದತೆ ಪ್ರತಿಪಾದಿಸುತ್ತದೆ. ಸಂವಾದ ಪ್ರಜಾಪ್ರಭುತ್ವದ ಪ್ರಧಾನ ತತ್ವವಾಗಿದೆ. ಸಂವಾದದಲ್ಲಿ ಸಹಿಷ್ಣುತೆ, ಅಭಿಪ್ರಾಯ, ಭಿನ್ನಾಭಿಪ್ರಾಯಗಳಿಗೂ ಮನ್ನಣೆ ದೊರೆಯುತ್ತದೆ ಎಂದರು.

ದೇಹವೇ ದೇಗುಲ, ಶರಣ ಸತಿ ಲಿಂಗ ಪತಿ, ಕಾಯಕವೇ ಕೈಲಾಸ ಇಂಥ ಪರಿಕಲ್ಪನೆ ನೀಡಿದ ವಚನ ಚಳುವಳಿ ಭಕ್ತಿಯ ಖಾಸಗೀಕರಣಕ್ಕೆ ಮಹತ್ವ ನೀಡಿದೆ. ಬಸವಣ್ಣನವರು ರಾಜಾಶ್ರಯದಲ್ಲಿ ಇದ್ದು ಚಳುವಳಿ ರೂಪಿಸಿದ್ದರು. ಪಂಪ ಕೂಡ ರಾಜಾಶ್ರಯದ ವ್ಯವಸ್ಥೆಯನ್ನು ವಿರೋಧಿಸಿದ್ದನು ಎಂದು ಹೇಳಿದರು.

ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್. ಬಿರಾದಾರ್ ಅವರು ಮಾತನಾಡಿ, ಕನ್ನಡ ಸಾಹಿತ್ಯ ಆರಂಭದಿಂದಲೂ ಸಮಾನತೆ ಮತ್ತು ಸೌಹಾರ್ದತೆಯ ಪಾಠ ಮಾಡುತ್ತಾ ಬಂದಿದೆ. ಅದನ್ನು ಗ್ರಹಿಸುವ, ಅರ್ಥೈಸುವ ಪ್ರಯತ್ನ ಮತ್ತೆ ಮತ್ತೆ ಮಾಡಬೇಕಿದೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ಡಾ. ಜಗನ್ನಾಥ್ ಹೆಬ್ಬಾಳೆ ಅವರು ಮಾತನಾಡಿ, ಕನ್ನಡದ ಸಾಕ್ಷಿ ಪ್ರಜ್ಞೆಯಾಗಿರುವ ಬರಗೂರರು ತಮ್ಮ ಕನ್ನಡ ಪರ ಕೆಲಸಗಳಿಂದ ಮನೆಮಾತಾಗಿದ್ದಾರೆ. ಅವರು ತಾಯಿ ಪ್ರೀತಿಯ ಜಾಯಮಾನವರು. ಎಂದಿಗೂ ಈ ನೆಲದ ಪ್ರಜಾಪ್ರಭುತ್ವದ, ಸಮಾನತೆಯ ಬಗೆಗೆ ಧ್ಯಾನಿಸಿದವರು ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಪ್ರತಿಷ್ಠಾನದ ನಿರ್ದೇಶಕ ಡಾ. ಭೀಮಾಶಂಕರ್ ಬಿರಾದಾರ್, ಕಾಲೇಜು ಪ್ರಾಚಾರ್ಯ ಡಾ. ಅಶೋಕ್‌ ಕುಮಾರ್ ವಣಗೀರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಟ ಆಕಾಂಕ್ಷ ಬರಗೂರು, ಉಪ ಪ್ರಾಚಾರ್ಯ ಡಾ. ಅರುಣಕುಮಾರ್ ಯಲಾಲ್, ಪ್ರತಿಷ್ಠಾನದ ನಿರ್ದೇಶಕ ಡಾ. ಶಿವಾಜಿ ಮೇತ್ರೆ, ಚಂದ್ರಕಾಂತ್ ಅಕ್ಕಣ್ಣ, ಸಂಜುಕುಮಾರ್ ನಡುಕರ್, ಅನೋಜಕುಮಾರ್, ಶರಣಪ್ಪ ಗದಲೆಗಾಂವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News