ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿ, ಪರಿಹರಿಸುವುದೇ ಪ್ರಜಾಸೇವಾ ಆಂದೋಲನ : ತಹಶೀಲ್ದಾರ್ ಶಿವಾನಂದ್ ಮೇತ್ರೆ
ಬೇಲೂರು ಗ್ರಾಮದಲ್ಲಿ ಪ್ರಜಾಸೇವಾ ಆಂದೋಲನ
ಹುಲಸೂರ್: ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿ, ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಶಿವಾನಂದ್ ಮೇತ್ರೆ ಹೇಳಿದರು.
ತಾಲೂಕಿನ ಬೇಲೂರ್ ಗ್ರಾಮದಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲಿ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಒಟ್ಟು 179 ಅರ್ಜಿಗಳನ್ನು ಸ್ವೀಕರಿಸಲಾಯಿತು. ಈ ವೇಳೆ ಮಾತನಾಡಿದ ತಹಸೀಲ್ದಾರ್, ಸಾರ್ವಜನಿಕರು ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳ ಪ್ರಯೋಜನ ಪಡೆಯಲು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ 179 ಅರ್ಜಿಗಳ ಪೈಕಿ ಒಂದೂ ಅರ್ಜಿ ವಿಲೇವಾರಿಯಾಗಿಲ್ಲ. ಇಲಾಖಾವಾರು ಮಾಹಿತಿಯಂತೆ ಎಲ್ಲ ಅರ್ಜಿಗಳೂ ಬಾಕಿ ಉಳಿದಿವೆ.
ಕಂದಾಯ ಇಲಾಖೆಗೆ 167, ತಾಲೂಕು ಪಂಚಾಯಿತಿಗೆ 1, ಗ್ರಾಮ ಪಂಚಾಯಿತಿಗೆ 3, ಕೃಷಿ ಇಲಾಖೆಗೆ 3, ಜೆಸ್ಕಾಂಗೆ 1, ಜಿಲ್ಲಾಧಿಕಾರಿಗಳ ಕಚೇರಿಗೆ 1, ಅಬಕಾರಿ ಇಲಾಖೆಗೆ 1 ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 2 ಅರ್ಜಿಗಳು ಸಲ್ಲಿಕೆಯಾಗಿವೆ.
ಸಾರ್ವಜನಿಕರಿಂದ ಸ್ವೀಕರಿಸಲಾದ ಎಲ್ಲ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಶೀಲಿಸಿ, ನಿಯಮಾನುಸಾರ ಕ್ರಮ ಕೈಗೊಂಡು ವಿಲೇವಾರಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ್ ಜಮ್ಮು, ಪಿಎಸ್‌ಐ ಪಂಡಿತ್, ಉಪ ತಹಶೀಲ್ದಾರ್ ಸುನೀಲಕುಮಾರ್ ಸಜ್ಜನಶೆಟ್ಟಿ, ಕಂದಾಯ ನಿರೀಕ್ಷಕ ಶರಣು ಪವಾಡಶೆಟ್ಟಿ, ಲೋಕೋಪಯೋಗಿ ಇಲಾಖೆ ಅಭಿಯಂತರ ಮಹೇಶ್ ಪಾಟೀಲ್, ಎಡಿಎಲ್‌ಆರ್ ಸುನೀಲಕುಮಾರ್, ಆಹಾರ ಇಲಾಖೆಯ ಅಶ್ವಿನಿ ಘಾಳೆ, ಪರಿಶಿಷ್ಟ ಪಂಗಡ ಇಲಾಖೆಯ ಮಹೇಶ್ ಹಾಗೂ ಕೃಷಿ ಇಲಾಖೆಯ ಆಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.