ಭಾರತೀಯ ಸಂಸ್ಕೃತಿಗೆ ವಾಲ್ಮೀಕಿ ಕೊಡುಗೆ ಅಪಾರ : ರಾಜಶೇಖರ್ ಪಾಟೀಲ್
ಹುಮನಾಬಾದ್ : ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಆದಿಕವಿ ಮಹರ್ಷಿ ವಾಲ್ಮೀಕಿ ಅವರು ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹೇಳಿದರು.
ಪಟ್ಟಣದ ಕೋಳಿವಾಡ ಬಡಾವಣೆಯಲ್ಲಿ ವಾಲ್ಮೀಕಿ ದೇವಸ್ಥಾನದ ಆವರಣದಲ್ಲಿ ಟೋಕರಿ ಕೋಳಿ ಸಮಾಜದ ವತಿಯಿಂದ ಸೋಮವಾರ ಆಯೋಜಿಸಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಅವರು ಸಂಸ್ಕೃತದಲ್ಲಿ ಬರೆದ ರಾಮಾಯಣವು ಜಗತ್ತಿನ ಪ್ರಮುಖ ಮತ್ತು ಆದಿಕಾವ್ಯಗಳಲ್ಲಿ ಒಂದಾಗಿದೆ. ಸತ್ಯ, ಧರ್ಮ, ಕರುಣೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ತಮ್ಮ ಕಾವ್ಯದ ಮೂಲಕ ಜಗತ್ತಿಗೆ ಸಾರಿದ್ದಾರೆ ಎಂದರು.
ಈ ಹಿಂದೆ ನನ್ನ ಆಡಳಿತ ಅವಧಿಯಲ್ಲಿ ಕೋಳಿವಾಡ ಬಡವಣೆಯ ಸಮಗ್ರ ಅಭಿವೃದ್ಧಿಗೆ ಹಾಗೂ ಮಹರ್ಷಿ ವಾಲ್ಮೀಕಿ ದೇವಸ್ಥಾನದ ಬೆಳವಣಿಗೆಗೆ ಪೂರಕವಾಗಿ ಅನೇಕ ಯೋಜನೆಗಳನ್ನು ನೀಡಿದ್ದೇನೆ. ದೇವಸ್ಥಾನದ ಆವರಣದಲ್ಲಿನ ಕಲ್ಯಾಣ ಮಂಟಪದ ನಿರ್ಮಾಣಕ್ಕೆ ನಮ್ಮ ಅವಧಿಯಲ್ಲಿ ಚಾಲನೆ ನೀಡಲಾಗಿತ್ತು. ಆದರೆ, ಕಲ್ಯಾಣ ಮಂಟಪ ಕಾಮಗಾರಿ ಮಾತ್ರ ಅಪೂರ್ಣವಾಗಿ ಉಳಿದುಕೊಂಡಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಳ್ಳಿಖೇಡ (ಕೆ) ಆಶ್ರಮದ ದತ್ತಾತ್ರೇಯ ಮಹಾರಾಜ, ರಾಮನಗರ ಆಶ್ರಮದ ರಾಜಶೇಖರ್ ಮಹಾರಾಜ, ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ್ ಪಾಟೀಲ್, ಅನಿಲ್ ಪಲ್ಲೇರಿ, ಶರಣು ಕಂದಗೂಳ್, ಅಪ್ಪರಾವ್ ಹಣಕುಣಿ, ಬಲವಂತ್ ಪೋಲದಾಸ್, ಲಖನ್ ಕೋಳಿವಾಡ್, ಅವಿನಾಶ್ ಪೋಲದಾಸ್, ದತ್ತು ಪರೀಟ್, ವಾಲ್ಮೀಕಿ ಪೋಲದಾಸ್, ಸಂತೋಷ್ ಸಂಗಮ್, ವೀರಣ್ಣ ಮಚಕುರಿ, ದಯಾನಂದ್ ಮೇತ್ರೆ, ಬಸವರಾಜ್ ಗಾಂಧಿನಗರ, ಸುರೇಶ್ ಕಲ್ಲೂರ್, ಉಮೇಶ್ ಕಲ್ಲೂರ್ ಹಾಗೂ ಸಿದ್ದು ಅಯ್ಯಣ್ಣನೋರ್ ಸೇರಿ ಅನೇಕರಿದ್ದರು.