Chamarajanagar | ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ; ಹತ್ತು ಮಂದಿಗೆ ಗಾಯ
ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಹೊರವಲಯದ ಮಹದೇಶ್ವರ ಐಟಿಐ ಕಾಲೇಜು ಮುಂಭಾಗ ಎರಡು ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಹತ್ತು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಬೆಂಗಳೂರಿನಿಂದ ಮಲೆ ಮಹದೇಶ್ವರ ಬೆಟ್ಟದತ್ತ ತೆರಳುತ್ತಿದ್ದ ಕಾರು ಹಾಗೂ ಕೊಳ್ಳೇಗಾಲದತ್ತ ತೆರಳುತ್ತಿದ್ದ ಮತ್ತೊಂದು ಕಾರು ಮುಖಾಮುಖಿಯಾಗಿ ಢಿಕ್ಕಿಯಾಗಿವೆ. ಅಪಘಾತದ ಪರಿಣಾಮ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರಿನಲ್ಲಿದ್ದ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಕೆಲವರಿಗೆ ಕೈಕಾಲು ಮುರಿತವಾಗಿದೆ ಎಂದು ತಿಳಿದುಬಂದಿದೆ.
ಗಾಯಗೊಂಡವರನ್ನು ಸುವರ್ಣ (37), ಲೋಕೇಶ್ (20), ಶ್ರೇಯಾ (16), ರುಕ್ಮಿಣಿ (42) ಮಂಜೇಶ್ (43), ಭಾಗ್ಯಮ್ಮ (55), ಮಹಾದೇವ (50), ಮನ್ಸೂರು (38), ಮಹಮ್ಮದ್ ದೊಫಿ (28), ನಿಜವುನ್ (29) ಎಂದು ಗುರುತಿಸಲಾಗಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಠಾಣಾಧಿಕಾರಿ ರವೀಂದ್ರ ಅವರ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸಿ, 108 ಆಂಬುಲೆನ್ಸ್‌ಗಳ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು