ಚಾಮರಾಜನಗರ : ಅಂತರಾಜ್ಯ ಗಡಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ತೊಮಿಯರ್ ಪಾಳ್ಯ ಸಮೀಪದ ಕಾಡಿನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣ ನಡೆದು ತಿಂಗಳು ಕಳೆದಿಲ್ಲ, ಇದರ ನಡುವೆ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದ್ದು, ಚುಕ್ಕಿ ಜಿಂಕೆಯೊಂದು ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ವನ್ಯಜೀವಿಧಾಮದ ಹನೂರು ವನ್ಯಜೀವಿ ಉಪವಿಭಾಗದ ಬಫರ್ ವಲಯದಲ್ಲಿ ಎದೆಯ ಭಾಗ ಹಾಗೂ ಎರಡು ಮುಂಗಾಲುಗಳಿಲ್ಲದ ಗಂಡು ಜಿಂಕೆಯ ಮೃತದೇಹ ಪತ್ತೆಯಾಗಿದ್ದು, ಬೇಟೆಯಾಡಿರುವ ಶಂಕೆ ವ್ಯಕ್ತವಾಗಿದೆ.

ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಶಾಖೆಯ ಉಪವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಸೆ.7ರ ರಾತ್ರಿ ಅರಣ್ಯದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ಗುಂಡಿನ ಶಬ್ದ ಕೇಳಿಬಂದಿದೆ ಎನ್ನಲಾಗಿದೆ. ತಕ್ಷಣ ಸಿಬ್ಬಂದಿ ಶಬ್ದ ಕೇಳಿದ ಸ್ಥಳದತ್ತ ತೆರಳಿ ಪರಿಶೀಲಿಸಿದರಾದರೂ, ಯಾವುದೇ ವ್ಯಕ್ತಿಗಳು ಪತ್ತೆಯಾಗಿರಲಿಲ್ಲ.

ಸೆ.8ರಂದು ಬೆಳಗ್ಗೆ ಅರಣ್ಯ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಎದೆಯ ಭಾಗ ಹಾಗೂ ಎರಡು ಮುಂಗಾಲುಗಳು ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಗಂಡು ಜಿಂಕೆಯ ಮೃತದೇಹ ಪತ್ತೆಯಾಗಿದೆ. ಇದರಿಂದ ಜಿಂಕೆಯನ್ನು ಬೇಟೆಯಾಡಿ ಮಾಂಸಕ್ಕಾಗಿ ದೇಹದ ಭಾಗಗಳನ್ನು ಕತ್ತರಿಸಿ ತೆಗೆದುಕೊಂಡಿರುವ ಶಂಕೆ ಮೂಡಿದೆ.

ಘಟನೆಗೆ ಸಂಬಂಧಿಸಿದಂತೆ ವನ್ಯಜೀವಿ ಅಪರಾಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ, ಆರೋಪಿಗಳ ಪತ್ತೆಗೆ ತನಿಖೆ ಹಾಗೂ ಶೋಧ ಕಾರ್ಯಾಚರಣೆ ಆರಂಭಿಸಿದೆ. ಘಟನಾ ಸ್ಥಳಕ್ಕೆ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿರಾಜ್ ಹೂಸೂರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor