×
Ad

ಚಾಮರಾಜನಗರ | ಅಪಹರಣ ಪ್ರಕರಣ : ದಂಪತಿ ಸಹಿತ ಮಗು ರಕ್ಷಣೆ ; ನಾಲ್ವರು ಆರೋಪಿಗಳ ಬಂಧನ

Update: 2025-03-05 00:12 IST

ಚಾಮರಾಜನಗರ : ಜಿಲ್ಲೆಯ ಬಂಡೀಪುರದಲ್ಲಿ ನಡೆದಿದ್ದ ಅಪಹರಣ ಪ್ರಕರಣವನ್ನು 24 ಗಂಟೆಯೊಳಗೆ ಪತ್ತೆಹಚ್ಚಿರುವ ಪೊಲೀಸರು ವಿಜಯಪುರದ ತೋಟದ ಮನೆಯೊಂದರಲ್ಲಿ ದಂಪತಿ ಮತ್ತು ಮಗುವನ್ನು ರಕ್ಷಣೆ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮೂವರ ಪತ್ತೆಗೆ ಕ್ರಮವಹಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರದ ಬಳಿ ಅಪಹರಣಕ್ಕೆ ಒಳಗಾಗಿದ್ದ ಮೂಲತಃ ದಾವಣಗೆರೆ ಚನ್ನಗಿರಿಯ, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ನಿಶಾಂತ್, ಪತ್ನಿ ಚಂದನ ಮತ್ತು 7 ವರ್ಷದ ಗಂಡು ಮಗುವನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಆರೋಪಿಗಳಾದ ಕೋಲಾರದ ಮಲ್ಲಿಕಾರ್ಜುನ(30), ಯಾದಗಿರಿಯ ಈರಣ್ಣ(32), ಸಿದ್ದರಾಮಯ್ಯ(40), ವಿಜಯಪುರದ ವಿಶ್ವನಾಥ(30) ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ಬಾಗಲಕೋಟೆಯ ಪುನೀತಾ, ಸ್ನೇಹಿತ್, ಭೀಮನಗೌಡ ಬಂಧನಕ್ಕಾಗಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಹರಣಕ್ಕೆ ಹಣಕಾಸು ವ್ಯವಹಾರ ಕಾರಣ: ತಲೆಮರೆಸಿಕೊಂಡಿರುವ ಪುನೀತ್ ಬಳಿ ನಿಶಾಂತ್ ಹಣ ಪಡೆದಿದ್ದ ಎನ್ನಲಾಗಿದೆ. ಹಣ ವಾಪಸ್ ಕೊಡದೆ ಇದ್ದಿದ್ದಕ್ಕೆ ಕಾದು ಕಣ್ಣಿಟ್ಟು ನಿಶಾಂತ್ ಕುಟುಂಬ ಬಂಡೀಪುರಕ್ಕೆ ಬಂದಿದ್ದಾಗ ಅವರನ್ನು ಅಪಹರಣ ಮಾಡಿ ವಿಜಯಪುರದ ಸಿಂದಗಿ ತಾಲೂಕಿನ ಹೊನ್ನಹಳ್ಳಿಯ ತೋಟಕ್ಕೆ ಕರೆದುಕೊಂಡು ಹೋಗಲಾಗಿತ್ತು. ಅಪಹರಣಕ್ಕೂ ಮೊದಲೇ ನಿಶಾಂತ್ ಉಳಿದುಕೊಂಡಿದ್ದ ರೆಸಾರ್ಟ್‌ಗೆ ಮಲ್ಲಿಕಾರ್ಜುನ ಬಂದು ರೂಂ ಕೇಳಿದ್ದ. ಈ ವೇಳೆ ಆತ ತಂದಿದ್ದ ಕಾರನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ಗಮನಿಸಿ ನಂಬರ್ ಪರಿಶೀಲನೆ ಮಾಡಿಸಿ ಇದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಗಳ ಬಂಧನಕ್ಕೆ ಕ್ರಮವಹಿಸಿದ್ದಾರೆ ಎಂದು ಎಸ್ಪಿ ಡಾ.ಬಿ.ಟಿ.ಕವಿತಾ ಸುದ್ದಿಗೋಷ್ಠಿ ನಡೆಸಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News