Chamarajanagar | ಚಿರತೆಗಿಟ್ಟಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ, 3 ತಾಸು ಬೋನಿನಲ್ಲೇ ಚೀರಾಟ!
ಚಾಮರಾಜನಗರ : ಜಿಲ್ಲೆಯ ಯಳಂದೂರು ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ಚಿರತೆಯನ್ನು ಹಿಡಿಯಲು ಇರಿಸಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬ ಸಿಲುಕಿ 3 ತಾಸಿಗೂ ಹೆಚ್ಚಿನ ಅವಧಿ ಇಲ್ಲೇ ಕೂಗಾಟ ನಡೆಸಿ ನಂತರ ಸ್ಥಳೀಯರ ನೆರವಿನೊಂದಿಗೆ ವಾಪಸ್ಸಾದ ಘಟನೆ ಸೋಮವಾರ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಗಂಗವಾಡಿ ಗ್ರಾಮದ ಕಿಟ್ಟಿ ಎಂಬಾತನೆ ಬೋನಿನಲ್ಲಿ ಸಿಲುಕಿದ ವ್ಯಕ್ತಿಯಾಗಿದ್ದಾನೆ. ಗಂಗವಾಡಿ ಗ್ರಾಮದಲ್ಲಿ ಕಳೆದ ಶನಿವಾರ ರಾತ್ರಿ ರಾಮಯ್ಯ ಎಂಬುವರಿಗೆ ಸೇರಿದ ಜಮೀನಿನಲ್ಲಿ ಚಿರತೆ ದಾಳಿ ನಡೆಸಿ ಮೂರು ಜಾನುವಾರುಗಳನ್ನು ಕೊಂದು ಹಾಕಿತ್ತು. ಈ ಸಂಬಂಧ ಶಾಸಕ ಎ.ಆರ್. ಕೃಷ್ಣಮೂರ್ತಿಯವರೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಚಿರತೆ ಹಿಡಿಯಲು ಕ್ರಮ ವಹಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಇದರ ಸೆರೆಗಾಗಿ ಗ್ರಾಮದಲ್ಲಿ ರವಿವಾರ ಎರಡು ಕಡೆ ಬೋನನ್ನು ಇರಿಸಿದ್ದರು. ಒಂದು ರಾಮಯ್ಯನವರ ಜಮೀನಿನಲ್ಲಿ ಇಟ್ಟಿದ್ದರೆ ಮತ್ತೊಂದು ಬೋನನ್ನು ರುದ್ರ ಎಂಬುವರ ಜಮೀನಿನಲ್ಲಿ ಇರಿಸಿದ್ದರು.
ಇದು ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಕಾಂಡಚಿನ ಗ್ರಾಮವಾಗಿದೆ. ರುದ್ರ ಎಂಬುವರ ಜಮೀನು ಗ್ರಾಮದಿಂದ ದೂರವಿದ್ದು ಇಲ್ಲಿ ಜನರ ಓಡಾಟ ಕಡಿಮೆ ಇದೆ. ಕುತೂಹಲಕ್ಕಾಗಿ ಇದೇ ಗ್ರಾಮದ ಕಿಟ್ಟಿ ಎಂಬ ವ್ಯಕ್ತಿ ಬೆಳಿಗ್ಗೆ 10.30 ಗಂಟೆಗೆ ಬೋನನ್ನು ನೋಡಲು ಒಬ್ಬರೇ ತೆರಳಿದ್ದಾರೆ. ಇದರ ಒಳ ಹೊಕ್ಕಿದ್ದಾರೆ. ಆಗ ಬೋನಿನ ಬಾಗಿಲು ಮುಚ್ಚಿಕೊಂಡಿದೆ. ಇವರು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಇದನ್ನು ತೆರೆಯಲು ಸಾಧ್ಯವಾಗಿಲ್ಲ. ಇವರ ಬಳಿ ಮೊಬೈಲ್ ಕೂಡ ಇರಲಿಲ್ಲ. ಹಾಗಾಗಿ ಇವರು ಇದರೊಳಗಿಂದಲೇ ಕಾಪಾಡಿ, ಕಾಪಾಡಿ ಎಂದು ಚೀರಾಟ ನಡೆಸಿದ್ದಾರೆ. ಆದರೆ ಚಿರತೆ ಭಯವಿದ್ದ ಕಾರಣ ಬೋನು ಇರಿಸಿದ್ದ ಜಾಗದಲ್ಲಿ ಇಲ್ಲಿನ ರೈತರು, ಕುರಿ, ದನಗಾಹಿಗಳು ತೆರಳಿಲ್ಲ. ಹಾಗಾಗಿ ಇವರು ಚೀರಾಟ ಯಾರಿಗೂ ಕೇಳಿಸಿಲ್ಲ. ನಂತರ ಇವರು ದಿಕ್ಕು ತೋಚದೆ ಇದರೊಳಗೆ ಬಂಧಿಯಾಗಿದ್ದಾರೆ.
ಮಧ್ಯಾಹ್ನ 2.30 ರ ವೇಳೆಗೆ ಕೆಲ ಊಟಕ್ಕೆ ತೆರಳುತ್ತಿದ್ದ ದನಗಾಹಿಗಳು, ರೈತರು ದೂರದಿಂದ ಇವರ ಕಣ್ಣಿಗೆ ಬಿದ್ದಿದ್ದಾರೆ. ಆಗ ಇವರು ಜೋರಾಗಿ ಕಿರುಚಿದ್ದಾರೆ. ಅಳುಕಿನಿಂದಲೇ ಕೆಲವರು ಧೈರ್ಯ ಮಾಡಿ ಈ ಬೋನಿನ ಹತ್ತಿರ ತೆರಳಿದ್ದಾರೆ. ಆಗ ಕಿಟ್ಟಿ, ನಾನು ಒಳಗೆ ಸಿಲುಕಿಕೊಂಡಿದ್ದೇನೆ. ನನ್ನನ್ನು ಕಾಪಾಡಿ ಎಂದು ಅಂಗಲಾಚಿದ್ದಾರೆ. ಆಗ ಇವರು ಪಕ್ಕದ ಜಮೀನಿನ ರುದ್ರಯ್ಯ ಎಂಬುವರಿಗೆ ಮಾಹಿತಿ ನೀಡಿ ಇವರೊಂದಿಗೆ ಕೆಲ ಗ್ರಾಮಸ್ಥರು ಬಂದು ಬೋನಿನ ಬಾಗಿಲನ್ನು ತೆರೆದು ಇವರನ್ನು ಸುರಕ್ಷಿತವಾಗಿ ಹೊರಕ್ಕೆ ತಂದಿದ್ದಾರೆ.