ಸುಬ್ಬಾರೆಡ್ಡಿಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆ: ಭಾಗ್ಯನಗರ, ಚೇಳೂರು, ಗುಡಿಬಂಡೆ ಬಂದ್

Update: 2026-08-05 14:59 IST

ಚಿಕ್ಕಬಳ್ಳಾಪುರ, ಆ. 5: ಭಾಗ್ಯನಗರ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗ್ಯನಗರ, ಚೇಳೂರು ಹಾಗೂ ಗುಡಿಬಂಡೆ ತಾಲೂಕು ಕೇಂದ್ರ ಬುಧವಾರ ಸಂಪೂರ್ಣ ಬಂದ್ ಆಗಿದ್ದು, ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.

ಬಂದ್ ವೇಳೆ ರಸ್ತೆ ತಡೆ, ಧರಣಿ, ಅರೆಬೆತ್ತಲೆ ಪ್ರತಿಭಟನೆ ಹಾಗೂ ಹಸಿ ಮೆಣಸಿನಕಾಯಿ ತಿಂದು ವಿನೂತನ ರೀತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಸರಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ, ಸುಬ್ಬಾರೆಡ್ಡಿ ಅವರು ಸಚಿವರಾಗಿ ಬರುತ್ತಾರೆ ಎಂದು ಸಿಹಿ ಹಂಚಲು ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ನಮ್ಮ ನೋವನ್ನು ವ್ಯಕ್ತಪಡಿಸಲು ಹಸಿ ಮೆಣಸಿನಕಾಯಿ ತಿಂದಿದ್ದೇವೆ ಎಂದು ಕಾರ್ಯಕರ್ತರು ಹೇಳಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಭಾಗ್ಯನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರೇಂದ್ರ, ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಈ ಹಿಂದೆಯೇ ಸಚಿವ ಸ್ಥಾನ ಲಭಿಸಬೇಕಾಗಿತ್ತು. ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಮತ್ತೊಮ್ಮೆ ಸಚಿವ ಸ್ಥಾನ ತಪ್ಪಿರುವುದು ಕಾರ್ಯಕರ್ತರಿಗೆ ಹಾಗೂ ಕ್ಷೇತ್ರದ ಜನತೆಗೆ ತೀವ್ರ ನೋವುಂಟು ಮಾಡಿದೆ. ಪಕ್ಷಕ್ಕೆ ನಿಷ್ಠೆಯಿಂದ ದುಡಿದಿರುವ ಸುಬ್ಬಾರೆಡ್ಡಿ ಅವರಿಗೆ ನ್ಯಾಯ ಸಿಗದ ಕಾರಣ, ತಾವು ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದರು.

ಎಐಸಿಸಿ ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಚೀಮುಲ್ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಬಾಗೇಪಲ್ಲಿ ಕ್ಷೇತ್ರದಿಂದ ಸತತ ಮೂರನೇ ಬಾರಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿರುವ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಆಗಲಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರಕಾರದಲ್ಲಿ ಮಂತ್ರಿ ಸ್ಥಾನ ನೀಡಲಾಗುವುದು ಎಂಬ ಆಶ್ವಾಸನೆ ಈ ಹಿಂದೆ ನೀಡಲಾಗಿತ್ತು. ಆದರೆ ಸಚಿವ ಸಂಪುಟ ವಿಸ್ತರಣೆಯಲ್ಲೂ ಅವರಿಗೆ ಅವಕಾಶ ನೀಡದಿರುವುದು ಕ್ಷೇತ್ರದ ಜನರಲ್ಲಿ ತೀವ್ರ ಬೇಸರ ಉಂಟುಮಾಡಿದೆ. ಸುಬ್ಬಾರೆಡ್ಡಿ ಅವರಂತಹ ಹಿರಿಯ ಹಾಗೂ ಜನಪರ ನಾಯಕರನ್ನು ಪಕ್ಷ ಕಡೆಗಣಿಸುತ್ತಿದೆಯೇ ಎಂಬ ಅನುಮಾನ ಕಾರ್ಯಕರ್ತರಲ್ಲಿ ಮೂಡಿದೆ. ಸಚಿವರ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ದಾರಿ ತಪ್ಪಿದೆಯೇ ಎಂಬ ಸಂಶಯವೂ ಜನರಲ್ಲಿ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ಪ್ರಚಾರ ಸಮಿತಿ ಅಧ್ಯಕ್ಷ ಕೋಟಪ್ಪ ಮಾತನಾಡಿ, 2023ರಲ್ಲಿ ಸರ್ಕಾರ ರಚನೆಯಾದಾಗಲೇ ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು. ಆಗಲೂ ಅವರು ಯಾವುದೇ ಅಸಮಾಧಾನ ವ್ಯಕ್ತಪಡಿಸದೆ ಪಕ್ಷದ ನಿಷ್ಠೆಯನ್ನು ಕಾಪಾಡಿಕೊಂಡಿದ್ದರು. ಇಂತಹ ಸೌಮ್ಯ ಸ್ವಭಾವದ ನಾಯಕರಿಗೆ ಸಚಿವ ಸ್ಥಾನ ಸಿಗದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಮಂಜುನಾಥ್ ರೆಡ್ಡಿ ಮಾತನಾಡಿ, ಸ್ವಾತಂತ್ರ್ಯಾನಂತರ ಭಾಗ್ಯನಗರ ಕ್ಷೇತ್ರಕ್ಕೆ ಸಚಿವ ಸ್ಥಾನ ಲಭಿಸಿಲ್ಲ. ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸುಬ್ಬಾರೆಡ್ಡಿ ಅವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಅವರಿಗೆ ಸಚಿವ ಸ್ಥಾನ ದೊರಕದಿರುವುದು ಜಿಲ್ಲೆಯ ಜನರಲ್ಲಿ ತೀವ್ರ ನಿರಾಶೆ ಉಂಟು ಮಾಡಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನರಸಿಂಹಪ್ಪ ಮಾತನಾಡಿ, ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಶಾಸಕರು ರಾಜೀನಾಮೆ ನೀಡಿದರೆ ಅದನ್ನು ಅಂಗೀಕರಿಸುತ್ತೇನೆ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ತೀವ್ರ ನೋವುಂಟು ಮಾಡಿದೆ. ಸರಕಾರ ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿರುವ ಕಾರಣವನ್ನು ಸ್ಪಷ್ಟಪಡಿಸಬೇಕು. ಸಚಿವ ಸ್ಥಾನ ದೊರೆಯುವವರೆಗೆ ಹೋರಾಟ ನಿಲ್ಲುವುದಿಲ್ಲ. ಮುಂದಿನ ದಿನಗಳಲ್ಲಿ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಮುಖಂಡ ಅಮರನಾಥ್ ರೆಡ್ಡಿ ಮಾತನಾಡಿ, ಕಳೆದ ಐವತ್ತು ವರ್ಷಗಳಲ್ಲಿ ಬಾಗೇಪಲ್ಲಿ ಕ್ಷೇತ್ರದಲ್ಲಿ ಯಾವುದೇ ಶಾಸಕ ಸತತವಾಗಿ ಮೂರು ಬಾರಿ ಆಯ್ಕೆಯಾಗಿಲ್ಲ. ಆದರೆ ಎಸ್.ಎನ್. ಸುಬ್ಬಾರೆಡ್ಡಿ ಅವರು ತಮ್ಮ ಕಾರ್ಯವೈಖರಿ, ಸಾಮಾಜಿಕ ಕಳಕಳಿ ಹಾಗೂ ಜನಸೇವೆಯ ಮೂಲಕ ಕ್ಷೇತ್ರದ ಜನರ ವಿಶ್ವಾಸವನ್ನು ಗಳಿಸಿ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಶಾಸಕ ಸುಬ್ಬಾರೆಡ್ಡಿ ಅವರು ರಾಜಕೀಯಕ್ಕೆ ಮಾತ್ರ ಸೀಮಿತರಾಗದೆ ಜನರೊಂದಿಗೆ ಬೆರೆತು ಅವರ ಕಷ್ಟಸುಖಗಳಲ್ಲಿ ಭಾಗಿಯಾಗುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೌಮ್ಯ ಸ್ವಭಾವ ಮತ್ತು ಜನಪರ ನಿಲುವಿನಿಂದ ಬಾಗೇಪಲ್ಲಿ, ಚೇಳೂರು ಹಾಗೂ ಗುಡಿಬಂಡೆ ಭಾಗದ ಜನರು ಅವರನ್ನು ಸಚಿವರಾಗಿ ನೋಡುವ ಅಪಾರ ಆಸೆ ಮತ್ತು ನಿರೀಕ್ಷೆ ಹೊಂದಿದ್ದರು.

ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸ್ಥಾನ ದೊರೆಯದಿರುವುದು ಕ್ಷೇತ್ರದ ಜನತೆಗೆ ತೀವ್ರ ನಿರಾಶೆ ಉಂಟುಮಾಡಿದೆ. ಅದಕ್ಕಾಗಿ ಮೂರು ಕ್ಷೇತ್ರಗಳ ಜನರು ಸ್ವಯಂಪ್ರೇರಿತರಾಗಿ ಬಂದ್ ಆಚರಣೆ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಮರನಾಥ್ ರೆಡ್ಡಿ ಹೇಳಿದರು.

ಜಿಲ್ಲೆಯ ಭಾಗ್ಯನಗರ, ಚೇಳೂರು ಹಾಗೂ ಗುಡಿಬಂಡೆ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಆಸ್ಪತ್ರೆ, ಔಷಧಿ ಅಂಗಡಿ ಹಾಗೂ ಹಾಲಿನ ಅಂಗಡಿಗಳನ್ನು ಹೊರತುಪಡಿಸಿ ಬಹುತೇಕ ಅಂಗಡಿ-ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ರಸ್ತೆ ಸಂಚಾರವೂ ಕೆಲಕಾಲ ಅಸ್ತವ್ಯಸ್ತಗೊಂಡಿತು. ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News