×
Ad

ಆರೆಸ್ಸೆಸ್ ಸಿದ್ದಾಂತ ಹೊಂದಿರುವ ಬಿಜೆಪಿಯಿಂದ ಸುಭದ್ರ ದೇಶ ಕಟ್ಟಲು ಸಾಧ್ಯವಿಲ್ಲ: ಕಿಮ್ಮನೆ ರತ್ನಾಕರ್

Update: 2025-07-09 22:02 IST

ಚಿಕ್ಕಮಗಳೂರು: ದೇಶ ಕಟ್ಟಲು ಕಾಂಗ್ರೆಸ್‍ನ ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕೇ ಹೊರತು ಬಿಜೆಪಿಯ ಆರೆಸ್ಸೆಸ್ ನ ಸಿದ್ದಾಂತವನ್ನು ದೇಶ ಅಳವಡಿಸಿಕೊಳ್ಳಬಾರದು, ಬಿಜೆಪಿಯ ಆರೆಸ್ಸೆಸ್ ಸಿ‌ದ್ದಾಂತವನ್ನು ದೇಶದ ಜನತೆ ತಿರಸ್ಕರಿಸುವುದರಿಂದ ಮಾತ್ರ ದೇಶದ ಏಕತೆ, ಸಾರ್ವಭೌಮತ್ವ, ಜಾತ್ಯತೀತತೆ, ಸಂವಿಧಾನವನ್ನು ರಕ್ಷಣೆ ಮಾಡಲು ಸಾಧ್ಯ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕರೆ ನೀಡಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಸ್ವಂತ ಸಿದ್ಧಾಂತವಿಲ್ಲ, ಅದು ಆರೆಸ್ಸೆಸ್ ಸಿದ್ಧಾಂತವನ್ನೇ ತನ್ನ ಸಿದ್ಧಾಂತವನ್ನಾಗಿಸಿಕೊಂಡ ಪಕ್ಷವಾಗಿದೆ, ಆದರೆ ಬಿಜೆಪಿಯವರು ಎಂದಿಗೂ ತಮ್ಮ ಆರೆಸ್ಸೆಸ್ ಸಿದ್ಧಾಂತದ ಬಗ್ಗೆ ಜನರಿಗೆ ಮನವರಿಕೆ ಮಾಡುವುದಿಲ್ಲ, ಆರೆಸ್ಸೆಸ್ ನ ಸಿದ್ಧಾಂತವನ್ನು ಜನರು ತಿಳಿದುಕೊಂಡರೇ ಈ ದೇಶ ಬಿಜೆಪಿ ಮುಕ್ತ ದೇಶವಾಗಲಿದೆ ಎಂದರು.

ದೇಶದಲ್ಲಿ ಸಾವಿರಾರು ಭಾಷೆ, ಜಾತಿಗಳಿವೆ, ಹಲವಾರು ಧರ್ಮಗಳಿವೆ. ಎಲ್ಲವನ್ನು, ಎಲ್ಲರನ್ನೂ ಒಟ್ಟಾಗಿ ಮುನ್ನಡೆಸುವುದರಿಂದ ಮಾತ್ರ ದೇಶದ ಏಕತೆ, ಜಾತ್ಯತೀತತೆಯನ್ನು ಉಳಿಸಲು ಸಾಧ್ಯ, ಅಸಹಿಷ್ಣುತೆಯಿಂದ ದೇಶವನ್ನು ಒಂದುಗೂಡಿಸಲು ಸಾಧ್ಯವಿಲ್ಲ. ಬಿಜೆಪಿಯವರದ್ದು ಆರೆಸ್ಸೆಸ್ ಸಿದ್ದಾಂತವಾಗಿದೆ ಎಂದರು.

ಆರೆಸ್ಸೆಸ್ ನ ಗೋಳ್ವಾಲ್ಕರ್, ಹೆಗಡೆವಾರ್ ರಂತವರು ಜಾತಿ ವ್ಯವಸ್ಥೆಯ ಪ್ರತಿಪಾದಕರಾಗಿದ್ದಾರೆ. ಆರೆಸ್ಸೆಸ್, ಬಿಜೆಪಿಯರಿಗೆ ದಲಿತರ ಉದ್ಧಾರ ಬೇಕಾಗಿಲ್ಲ, ಈ ಬಗ್ಗೆ ಆರೆಸ್ಸೆಸ್ ನಾಯಕರು, ಬಿಜೆಪಿಯ ನಾಯಕರೂ ಮಾತನಾಡುವುದಿಲ್ಲ. ಇಂತಹ ಜಾತಿ ವ್ಯವಸ್ಥೆ ನಮಗೆ ಬೇಕಾ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಅವರನ್ನು ಸದ್ಯ ಬಿಜೆಪಿಯವರು ವಿಶ್ವಗುರು ಎನ್ನುತ್ತಿದ್ದಾರೆ, ಆದರೆ ಈ ಪದ ಈಗ ಹುಟ್ಟಿದ್ದಲ್ಲ, ಗೋಳ್ವಾಲ್ಕರ್ ಅವರ ಬಂಚ್ ಆಫ್ ಥಾಟ್ ಪುಸ್ತಕದಲ್ಲೇ ಈ ಪದ ಇದೆ, ಬಿಜೆಪಿಯವರು ಅಧಿಕಾರದಲ್ಲಿದ್ದರೇ ಆರೆಸ್ಸೆಸ್ ನ ಸಿದ್ದಾಂತತವನ್ನೇ ಜಾರಿಗೆ ತರುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ಸಂಸ್ಕೃತ ಮೊದಲ ಭಾಷೆಯಾಗಿರಬೇಕು ಎಂಬುದನ್ನು ಬಿಜೆಪಿಯವರು ಈಗ ಹೇಳುತ್ತಿದ್ದಾರೆ, ಇದು ಕೂಡ ಆರೆಸ್ಸೆಸ್ ನ ಸಿದ್ಧಾಂತವಾಗಿದೆ, ಸಂಸ್ಕೃತ ಮೊದಲ ಭಾಷೆಯಾದರೇ ಪ್ರಾದೇಶಿಕ ಭಾಷೆಗಳ ಗತಿ ಏನು?, ಕರ್ನಾಟಕದಲ್ಲಿ ಮೊದಲ ಭಾಷೆ ಸಂಸ್ಕೃತ ಆಗಿರಬೇಕೋ, ಸಂಸ್ಕೃತ ಆಗಿರಬೇಕೋ? ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ಸಂಸ್ಕೃತ ಮೊದಲ ಭಾಷೆಯಾಗಿರಬೇಕು ಎನ್ನುವ ಆರೆಸ್ಸೆಸ್ ನ ನಿಲುವಿನ ಬಗ್ಗೆ ಚಕಾರ ಎತ್ತುವುದಿಲ್ಲ ಎಂದರು.

ಸಂವಿಧಾನವನ್ನು ಬದಲಾಯಿಸಲ್ಲ ಎಂದು ಮೋದಿ ಇತ್ತೀಚೆಗೆ ಹೇಳಿದ್ದಾರೆ, ಆದರೆ ಮಾಜಿ ಸಂಸದ ಅನಂತ್‍ ಕುಮಾರ್ ಹೆಗಡೆ ಹಿಂದೆಯೇ ನಾವು ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದಿದ್ದರು, ಇದರಿಂದ ಅಧಿಕಾರ ಹಿಡಿಯುವುದು ಕಷ್ಟ ಎಂಬ ಅರಿವಾಗುತ್ತಿದ್ದಂತೆ ಅನಂತ್‍ ಕುಮಾರ್ ಹೆಗಡೆ ಅವರನ್ನೇ ಮೂಲೆ ಗುಂಪು ಮಾಡಲಾಗಿದೆ. ಈಗ ಸಂವಿಧಾನದ ಪರ ಬಿಜೆಪಿಯವರು ಮಾತನಾಡುತ್ತಿದ್ದಾರೆ ಎಂದ ಅವರು, ಆರೆಸ್ಸೆಸ್ ಮತ್ತು ಬಿಜೆಪಿವರು ಮೀಸಲಾತಿ ವಿರೋಧಿಗಳು, ಮೀಸಲಾತಿ ತೆಗೆಯುತ್ತೇವೆ ಎನ್ನುತ್ತಾ ಶೋಷಿತ ಸಮುದಾಯಗಳ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ, ಅಂಬೇಡ್ಕರ್ ಅವರ ಆಶಯವಾದ ಮೀಸಲಾತಿಯನ್ನು ವಿರೋಧಿಸುವ ಪಕ್ಷ ಅಧಿಕಾರದಲ್ಲಿರಬೇಕಾ? ಎಂದು ಪ್ರಶ್ನಿಸಿದರು.

ಒಂದು ದೇಶ, ಒಂದು ಭಾಷೆ, ಒಂದು ಚುನಾವಣೆ, ಒಂದೇ ಶಿಕ್ಷಣ ಎನ್ನುವ ಬಿಜೆಪಿಯವರಿಂದಾಗಿ ಭಾಷಾವಾರು ಪ್ರಾಂತ್ಯಗಳ ವ್ಯವಸ್ಥೆ ಹಾಳಾಗಲಿದೆ ಎಂದ ಅವರು, ಸಂವಿಧಾನವನ್ನು ಪುನರ್‍ರಚನೆ ಮಾಡಬೇಕು ಎಂದು ಹೇಳುತ್ತಿದ್ದವರು ಈಗ ಸಂವಿಧಾನವನ್ನು ರಕ್ಷಣೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಈ ಮಧ್ಯೆ ಸಂವಿಧಾನದಲ್ಲಿರುವ ಜಾತ್ಯತೀತ ಪದವನ್ನೇ ತೆಗೆಯಬೇಕು ಎನ್ನುತ್ತಿದ್ದಾರೆ. ಇದೆಲ್ಲವೂ ಆರೆಸೆಸ್ ಸಿದ್ದಾಂತವನ್ನು ನಿಧಾನವಾಗಿ ಜಾರಿಗೊಳಿಸುವ ಹುನ್ನಾರವಾಗಿದೆ. ದೇಶಕ್ಕೆ ಬೇಕಾಗಿರುವು ಆರೆಸೆಸ್ ಸಿದ್ಧಾಂತವಲ್ಲ, ದೇಶವನ್ನು ಒಂದುಗೂಡಿಸುವ ಗಾಂಧಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಅವರ ಸಿದ್ಧಾಂತವನ್ನೇ ಹೊಂದಿರುವ ಕಾಂಗ್ರೆಸ್ ಸಿದ್ಧಾಂತದಿಂದ ಮಾತ್ರ ಸುಭದ್ರ ದೇಶ ಕಟ್ಟಲು ಸಾಧ್ಯ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್, ಮುಖಂಡರಾದ ನಾರಾಯಣ್ ರಾವ್, ಪ್ರವೀಣ್, ನಾಗೇಶ್, ಹಿರೇಗೋಜ ಶಿವು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News