Chikkamagaluru | ಕಾಫಿನಾಡಿನ ಯುವಕನನ್ನು ವರಿಸಿದ ಚೀನಾ ಯುವತಿ
ಚಿಕ್ಕಮಗಳೂರು: ಚೀನಾ ದೇಶದ ಯುವತಿ ಜೇಡ್ ಮತ್ತು ಕಾಫಿನಾಡಿನ ಯುವಕ ರೂಪಕ್ ಪರಸ್ಪರ ಇಷ್ಟಪಟ್ಟು ಶುಕ್ರವಾರ ಸಪ್ತಪದಿ ತುಳಿದರು.
ದಂಪತಿಗೆ ಶಾಸಕ ಎಚ್.ಡಿ.ತಮ್ಮಯ್ಯ ಸೇರಿದಂತೆ ಗಣ್ಯರು ಹಾಗೂ ನೂರಾರು ಮಂದಿ ಶುಭಹಾರೈಸಿದರು.
ಹಿರೇಗೌಜ ಗ್ರಾಮದ ಬಳಿ ಕಾಫಿ, ಅಡಿಕೆ, ತರಕಾರಿ ಕೃಷಿ ಮಾಡಿಕೊಂಡಿರುವ ಶ್ರೀನಿವಾಸ ಮತ್ತು ಕಸ್ತೂರಿ ದಂಪತಿ ಪುತ್ರ ಕೆ.ಎಸ್.ರೂಪಕ್ ಸುಮಾರು ಏಳೆಂಟು ವರ್ಷದ ಹಿಂದೆ ಅಧ್ಯಯನಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಯುನಿರ್ವಸಿಟಿ ಆಫ್ ಕ್ವೀನ್ಸ್ ಲ್ಯಾಡ್‍ನಲ್ಲಿ ಎಂಬಿಎ ವ್ಯಾಸಂಗ ಮಾಡಿದವರು. ಚೀನಾ ದೇಶದ ಗಾಂಗ್‍ಜಾವ್ ಪಟ್ಟಣದ ಡಾ.ಜಿನ್‍ಚಾಂಗ್ ಲಯಾವ್ ಮತ್ತು ಡಾ.ಶಾಂಗ್‍ಕಿಯಾನ್ ವೈದ್ಯ ದಂಪತಿ ಪುತ್ರಿ ಲೂ ವು (ಜೇಡ್) ಸಹ ಆಸ್ಟ್ರೇಲಿಯಾದಲ್ಲಿ ಅಧ್ಯಯನಕ್ಕೆ ಬಂದಿದ್ದರು. ಇಬ್ಬರಿಗೂ ಪರಿಚಯವಾಗಿ ಪರಿಚಯ ಪ್ರೇಮವಾಗಿ ಪರಿವರ್ತನೆಗೊಂಡಿತು.
ಶಿಕ್ಷಣದ ನಂತರ ರೂಪಕ್ ಆಸ್ಟ್ರೇಲಿಯಾದ ಮೂರನೇ ಅತಿದೊಡ್ಡ ನಗರವಾದ ಬ್ರೆಸ್‍ಬೈನ್‍ನಲ್ಲಿ ನೆಲೆಸಿ ಬ್ರೆಡ್ಸ್ ಗ್ರೂಫ್ ಫೈನಾಸ್ಷಿಯಲ್ ಕಂಟ್ರೋಲರ್ ಉದ್ಯೋಗ ನಿರ್ವಹಿಸುತ್ತಿದ್ದು, ಜೀಡ್‍ಕೂಡ ಲಿನೊವೋ ಕಂಪನಿಯ ಪಾಲುದಾರರಾಗಿ ಉದ್ಯೋಗ ನಿರತರಾಗಿದ್ದಾರೆ. ಇಬ್ಬರೂ ಕುಟುಂಬದ ಹಿರಿಯರು, ಬಂಧು-ಮಿತ್ರರ ಆಶೀರ್ವಾದ ಪಡೆದು ವಿವಾಹವಾಗಲು ತೀರ್ಮಾನಿಸಿದ್ದಾರೆ.