Chikkamagaluru | ಬಾಲಕಿಯ ಅಪಹರಣ ಆರೋಪ; ಅಸ್ಸಾಂ ಮೂಲದ ಯುವಕನ ವಿರುದ್ಧ ಪೊಕ್ಸೊ ಪ್ರಕರಣ ದಾಖಲು
ಚಿಕ್ಕಮಗಳೂರು : ಮೂಡಿಗೆರೆ ತಾಲೂಕು ಬಾಳೂರು ವ್ಯಾಪ್ತಿಯ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಹಬೀವರ್ ಇಸ್ಲಾಂ ಎಂಬಾತನ ವಿರುದ್ದ ಬಾಳೂರು ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ತಿಳಿಸಿದ್ದಾರೆ.
ಘಟನೆ ಸಂಬಂಧ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಧ್ಯಪ್ರದೇಶ ಮೂಲದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆರೋಪಿ ಯುವಕ ಅಸ್ಸಾಂಗೆ ಕರೆದುಕೊಂಡು ಹೋಗಿದ್ದು, ಇತ್ತೀಚೆಗೆ ಅವರಿಬ್ಬರು ಮತ್ತೆ ಕಾಫಿತೋಟಕ್ಕೆ ಬಂದಿದ್ದಾರೆ. ಈ ಹಿನ್ನೆಲೆ ಬಾಲಕಿ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದರು.
ಈ ಹಿಂದೆ ಕಾಫಿ ಕೊಯ್ಲು ಮುಗಿದ ನಂತರ ಬಾಲಕಿ ನಾಪತ್ತೆಯಾಗಿದ್ದಾಗ, ಆಕೆ ಬೀರೂರು ರೈಲ್ವೆ ನಿಲ್ದಾಣದ ಮೂಲಕ ಬೇರೆಡೆಗೆ ಹೋಗಿರುವ ಸಾಧ್ಯತೆ ಬಗ್ಗೆ ಪೋಷಕರಿಗೆ ಮಾಹಿತಿ ಇತ್ತು.ಹಾಗಾಗಿ ಅವರು ಸ್ವಲ್ಪದಿನ ಕಾದಿದ್ದರು. ಆದರೆ, ಬಾಲಕಿ ಯುವಕನೊಂದಿಗೆ ವಾಪಸ್ ಬಂದ ತಕ್ಷಣ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಲಕಿಯ ಕುಟುಂಬವೂ ಮಧ್ಯಪ್ರದೇಶ ಮೂಲದ್ದಾಗಿದ್ದು, ಇಲ್ಲಿಗೆ ಕೂಲಿ ಕೆಲಸಕ್ಕೆ ಬಂದಿದ್ದರು. ಹಾಗೇ ಆರೋಪಿ ಯುವಕನ ಕುಟುಂಬ ಅಸ್ಸಾಂನಿಂದ ಬಂದು ಇಲ್ಲಿನ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.