ಇಂದು ರಾತ್ರಿಯೊಳಗೆ ಕಾಡಾನೆಗಳನ್ನು ಹಾಸನಕ್ಕೆ ವಾಪಸ್ ಕಳುಹಿಸದಿದ್ದರೆ ನಾಳೆ ರಾಜೀನಾಮೆ: ಶಾಸಕಿ ನಯನ ಮೋಟಮ್ಮ
ಕಾಡಾನೆಗಳ ಸ್ಥಳಾಂತರಕ್ಕೆ ಮೂವರು ಶಾಸಕರ ವಿರೋಧ: ರಾಜೀನಾಮೆ ಎಚ್ಚರಿಕೆ
ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ತಾಲೂಕು ಭಾಗದಿಂದ ಮೂಡಿಗೆರೆ ತಾಲೂಕು ಭಾಗಕ್ಕೆ ಕಾಡಾನೆಗಳನ್ನು ಅಟ್ಟಲಾಗಿದ್ದು, ಇಂದು ರಾತ್ರಿಯೊಳಗೆ ಅವುಗಳನ್ನು ಮೂಲಸ್ಥಾನಕ್ಕೆ ವಾಪಸ್ ಕಳುಹಿಸದಿದ್ದರೆ ನಾಳೆ ರಾಜೀನಾಮೆ ನೀಡುವುದಾಗಿ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಹಾಗೂ ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿರುವ 52 ಕಾಡಾನೆಗಳನ್ನು ಅಲ್ಲಿನ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಶಾಸಕರ ಗಮನಕ್ಕೆ ತರದೆ ಮೂಡಿಗೆರೆ ಮಾರ್ಗವಾಗಿ ಭದ್ರಾ ಅಭಯಾರಣ್ಯಕ್ಕೆ ಕಳುಹಿಸಲು ಮುಂದಾಗಿರುವುದು ಖಂಡನೀಯ ಎಂದರು.
ಹಾಸನ ಜಿಲ್ಲೆಯ ಜನರ ಜೀವಕ್ಕೆ ಮಾತ್ರವೇ ಬೆಲೆಯಿದೆಯೇ? ಚಿಕ್ಕಮಗಳೂರು ಜಿಲ್ಲೆಯ ಜನಸಾಮಾನ್ಯರ ಜೀವಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ ಅವರು, ತಮಗೆ ಅಧಿಕಾರಕ್ಕಿಂತ ಜನಸಾಮಾನ್ಯರ ಜೀವ ಮುಖ್ಯ. ಜನರ ಹಿತಕ್ಕಾಗಿ ಅಧಿಕಾರ ತ್ಯಜಿಸಲೂ ಸಿದ್ಧ ಎಂದು ಸ್ಪಷ್ಟಪಡಿಸಿದರು.
ಮೂಡಿಗೆರೆ ಭಾಗಕ್ಕೆ ಬಂದಿರುವ ಕಾಡಾನೆಗಳನ್ನು ವಾಪಸ್ ಹಾಸನದ ಮೂಲಸ್ಥಾನಕ್ಕೆ ಕಳುಹಿಸಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಮೂವರು ಶಾಸಕರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.