ಚಿಕ್ಕಮಗಳೂರು : ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಬಿಂಡಿಗ ದೇವಿರಮ್ಮ ಬೆಟ್ಟದಲ್ಲಿರುವ ದೇವಿರಮ್ಮನ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಹರಿದು ಬಂದಿದ್ದು, ಬೆಟ್ಟ ಏರುವ ಸಂದರ್ಭದಲ್ಲಿ ಬೆಟ್ಟದ ಇಳಿಜಾರಿನಲ್ಲಿ ತಡೆಗೋಡೆಗೆ ಹಾಕಿದ್ದ ಕಂಬಿಯೊಂದು ಮುರಿದ ಪರಿಣಾಮ ಒಬ್ಬರ ಮೇಲೊಬ್ಬರು ಬಿದ್ದು 20 ಮಂದಿ ಗಾಯಗೊಂಡಿರುವ ಘಟನೆ ರವಿವಾರ ನಡೆದಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಂಡಿಗ ದೇವಿರಮ್ಮನ ಬೆಟ್ಟ ಏರಿ ದೇವರ ದರ್ಶನ ಪಡೆಯುವುದು ವಾಡಿಕೆಯಾಗಿದ್ದು, ಅದರಂತೆ ಈ ಬಾರಿಯೂ ಶನಿವಾರ ರಾತ್ರಿಯಿಂದಲೇ ಬೆಟ್ಟ ಏರಲು ಸಾವಿರಾರು ಭಕ್ತರು ಆಗಮಿಸಿದ್ದರು. ಶನಿವಾರ ಮುಂಜಾನೆ ವ್ಯಕ್ತಿಯೊಬ್ಬರು ಬೆಟ್ಟದಿಂದ ಜಾರಿ ಬಿದ್ದು ಗಾಯಗೊಂಡಿದ್ದು, ಈ ಘಟನೆ ಬೆನ್ನಲ್ಲೇ ರವಿವಾರ ಮಧ್ಯಾಹ್ನದ ವೇಳೆ ಬೆಟ್ಟ ಏರಲು ಭಕ್ತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬೆಟ್ಟದ ಇಳಿಜಾರಿನಲ್ಲಿ ತಡೆಗೋಡೆಯಂತೆ ಹಾಕಲಾಗಿದ್ದ ಕಬ್ಬಿಣದ ಕಂಬಿಯೊಂದು ಮುರಿದಿದೆ. ಈ ವೇಳೆ ಕಂಬಿ ಹಿಡಿದು ಬೆಟ್ಟ ಏರುತ್ತಿದ್ದ ಭಕ್ತರು ಒಬ್ಬರ ಮೇಲೊಬ್ಬರಂತೆ ಬಿದ್ದಿದ್ದಾರೆ. ಪರಿಣಾಮ 20 ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ರಕ್ಷಣೆ ಮಾಡಿ ಕೂಡಲೇ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಎಲ್ಲ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೇವಿರಮ್ಮ ಬೆಟ್ಟ ಏರಲು ಆಗಮಿಸಿದ್ದ ವ್ಯಕ್ತಿಯೊಬ್ಬರು ಬೆಟ್ಟ ಏರುವ ಸಂದರ್ಭ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ರವಿವಾರ ಮುಂಜಾನೆ ವರದಿಯಾಗಿದೆ. ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಲಕ್ಷ್ಮಣ್ ಮೃತರಾಗಿದ್ದು, ಈ ಹಿಂದೆ ಹೃದಯಾಘಾತಕ್ಕೆ ಒಳಗಾಗಿ ಬೈಪಾಸ್ ಸರ್ಜರಿ ಮಾಡಿಕೊಂಡಿದ್ದ ಇವರು ರವಿವಾರ ಮುಂಜಾನೆ ಸ್ನೇಹಿತರೊಂದಿಗೆ ದೇವಿರಮ್ಮ ಬೆಟ್ಟ ಏರುತ್ತಿದ್ದ ವೇಳೆ ಉಸಿರಾಟದ ತೊಂದರೆಯಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ರಕ್ಷಣಾ ಸಿಬ್ಬಂದಿ ಲಕ್ಷ್ಮಣ್ ಅವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ, ಆದರೆ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಘಟನೆ ಸಂಬಂದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor