ಮೂಡಿಗೆರೆ ಶಾಸಕಿಯನ್ನು ಪಕ್ಷದಿಂದ ಉಚ್ಚಾಟಿಸಬೇಕಿತ್ತು : ಕೆ.ಮುಹಮ್ಮದ್
ಚಿಕ್ಕಮಗಳೂರು ಜಿಲ್ಲಾ ಮುಸ್ಲಿಮ್ ಒಕ್ಕೂಟದ ಸಭೆ
ಚಿಕ್ಕಮಗಳೂರು : ಜಿಲ್ಲೆಯಲ್ಲಿರುವ ಮುಸ್ಲಿಮ್ ಸಮುದಾಯ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸೂಕ್ತ ಸ್ಪಂದನ ಸಿಗುತ್ತಿಲ್ಲ ಎಂಬ ನೋವು ಸಮಾಜದಲ್ಲಿದೆ. ಆದ್ದರಿಂದ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾ ಮುಸ್ಲಿಮ್ ಒಕ್ಕೂಟ ರಚನೆಗೊಂಡಿದೆ ಎಂದು ಜಿಪಂ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಹಿರಿಯ ಮುಖಂಡ ಕೆ.ಮುಹಮ್ಮದ್ ತಿಳಿಸಿದ್ದಾರೆ.
ನಗರದ ಜಿ.ಕೆ.ಪ್ಯಾಲೇಸ್ ಸಭಾಭವನದಲ್ಲಿ ಶನಿವಾರ ನಡೆದ ಚಿಕ್ಕಮಗಳೂರು ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಥಮ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ಮೂಡಿಗೆರೆಯಲ್ಲಿ ನಮ್ಮ ಮತಗಳನ್ನು ಪಡೆದು ಶಾಸಕಿಯಾದ ನಯನಾ ಮೋಟಮ್ಮ ಅವರು ಕೋಮುವಾದಿಯೊಬ್ಬ ಭಾಗವಹಿಸಿದ್ದ ಸಭೆಯಲ್ಲಿ ಮಾತನಾಡಿ, ಆ ವ್ಯಕ್ತಿಯನ್ನು ಕೊಂಡಾಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಈ ವಿಚಾರದ ಬಗ್ಗೆ ಬೇಸತ್ತ ಮೂಡಿಗೆರೆಯ ನಮ್ಮ ಮುಖಂಡರು ಸಭೆ ಸೇರಿ ಶಾಸಕಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಅವರು, ನನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತೀರಾ ಎಂದು ಪ್ರಶ್ನಿಸಿ, ಮುಖಂಡರ ಕರೆಗೆ ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.
ಈ ಶಾಸಕಿಯ ಬಗ್ಗೆ ಅವರ ಪಕ್ಷದ ಹಿರಿಯ ನಾಯಕರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇಂತಹವರನ್ನು ಪಕ್ಷವು ಉಚ್ಛಾಟನೆ ಮಾಡಬೇಕಿತ್ತು. ಇಂತಹ ಭಾಷಣ ಮಾಡಿದ ಶಾಸಕಿಯನ್ನು ಬೆಂಬಲಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರು ಶಾಸಕಿಗೆ ಪತ್ರ ಬರೆದಿದ್ದಾರೆ. ಅಂತಹವರಿಗೆ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ನಮ್ಮ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ, ಎಂ.ಎಲ್.ಮೂರ್ತಿ ಅಂತಹವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ. ನಮ್ಮ ಸಮುದಾಯದ ಬೆಂಬಲಕ್ಕೆ ನಿಂತಿದ್ದ ಮೂರ್ತಿಯವರ ಬೆಂಬಲಕ್ಕೆ ಇಡೀ ಸಮಾಜ ನಿಲ್ಲಬೇಕಿದೆ. ಮುಂಬರುವ ತಾಲೂಕು, ಜಿಪಂ ಚುನಾವಣೆಯ ಸಂದರ್ಭದಲ್ಲಿ ಈ ರೀತಿ ನಮ್ಮ ಸಮಾಜದ ಬಗ್ಗೆ ಅಸಡ್ಡೆ ತೋರಿದರೆ ನಾವು ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಸ್ಲಿಮ್ ಸಮಾಜಕ್ಕೆ ಮಂಜೂರಾದ ಅನುದಾನ ಪೂರ್ಣ ಪ್ರಮಾಣದಲ್ಲಿ ಸರಕಾರ ಬಿಡುಗಡೆಗೊಳಿಸಲಿಲ್ಲ. ಮುಸ್ಲಿಮ್ ಸಮಾಜಕ್ಕೆ ಇದ್ದ ಶೇ.4ರಷ್ಟು ಮೀಸಲಾತಿ ಈ ಹಿಂದಿನ ಸರಕಾರ ರದ್ದುಗೊಳಿಸಿತ್ತು. ಅದನ್ನು ಪುನಃ ಜಾರಿಗೊಳಿಸಲು ಈಗಿನ ಸರಕಾರ ಮುಂದಾಗಲಿಲ್ಲ, ನಮ್ಮ ಸಮುದಾಯದ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಕೆ.ಮುಹಮ್ಮದ್ ಎಚ್ಚರಿಕೆ ನೀಡಿದರು.
ಮುಖಂಡ ಸಿ.ಎನ್.ಅಕ್ಮಲ್ ಮಾತನಾಡಿ, ಕುರ್‌ಆನ್ ಬಗ್ಗೆ ಗೊತ್ತಿಲ್ಲದಿರುವವರು ಅದರ ಬಗ್ಗೆ ಮಾತನಾಡುತ್ತಾರೆ. ಕುರ್‌ಆನ್ ಅಂದರೆ ಶಾಂತಿ. ಮುಸ್ಲಿಮ್ ಸಮುದಾಯ ಜಿಲ್ಲೆಯ ಪ್ರತಿ ಕ್ಷೇತ್ರದಲ್ಲೂ ಶಾಸಕರಾಗಲು ಸಾಮರ್ಥ್ಯ ಹೊಂದಿರುವ ಒಬ್ಬರಾನ್ನದರೂ ಬೆಳೆಸಬೇಕು. ಅದಕ್ಕೆ ಸಮುದಾಯದಲ್ಲಿ ಒಗ್ಗಟ್ಟಿರಬೇಕು ಎಂದು ಕಿವಿಮಾತು ಹೇಳಿದರು.
ಪ್ರತಿ ತಾಲೂಕಿನಲ್ಲೂ ನಮ್ಮ ಸಮುದಾಯದ ಸಂಖ್ಯಾ ಬಲವಿದೆ. ಆದರೂ ನಮಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಿಕ್ಕಿದರೆ ನಮ್ಮವರು ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಾಗುತ್ತಿದ್ದರು. ನಮ್ಮಲ್ಲಿ ಒಗ್ಗಟ್ಟಿಲ್ಲ. 60 ಸಾವಿರ ಸಂಖ್ಯೆ ಇರುವ ಜನಾಂಗಕ್ಕೆ 80 ಶಾಸಕರು ಇರುತ್ತಾರೆ. ಆದರೆ, 1 ಕೋಟಿ ಜನಸಂಖ್ಯೆ ಹೊಂದಿರುವ ಮುಸ್ಲಿಮ್ ಸಮುದಾಯಕ್ಕೆ ಕೇವಲ 15 ಶಾಸಕರು ಮಾತ್ರ. ಇದು ನ್ಯಾಯವೇ ಎಂದು ಸಿ.ಎನ್ ಅಕ್ಮಲ್ ಪ್ರಶ್ನಿಸಿದರು.
ಮುಖಂಡ ಕಿರುಗುಂದ ಅಬ್ಬಾಸ್, ಮೂಡಿಗೆರೆಯ ಸಿ.ಕೆ.ಇಬ್ರಾಹೀಂ, ಕೊಪ್ಪದ ಇಜಾಝ್ ಅಹ್ಮದ್ ಝಾಕಿರ್‌ಹೊರಟಿ, ಅತೀಕ್ ಕೈಸರ್ ಇಬ್ರಾಹೀಂ ಮತ್ತಿತರರು ಮಾತನಾಡಿದರು.
ಸಭೆಯಲ್ಲಿ ನಗರಸಭೆ ಮಾಜಿ ಸದಸ್ಯ ನೂರ್ ಮಹಮ್ಮದ್ ಹಾಗೂ ಇತರರು ಉಪಸ್ಥಿತರಿದ್ದರು.