ಜನರ ಸೇವೆಗೆ ನನ್ನ ಜೀವನ ಸಮರ್ಪಣೆ : ಬಿ.ಎಸ್.ಯಡಿಯೂರಪ್ಪ
ʼಬಿಎಸ್‍ವೈ ಅಭಿಮಾನೋತ್ಸವʼ ಕಾರ್ಯಕ್ರಮ
ಬೆಂಗಳೂರು/ಚಿತ್ರದುರ್ಗ, ಮೇ 9 : ‘ಐವತ್ತು ವರ್ಷಗಳಿಂದ ನಾಡಿನ ಜನರ ಸೇವೆಗೆ ಜೀವನ ಸಮರ್ಪಣೆ ಮಾಡಿಕೊಂಡು ಬಂದಿದ್ದೇನೆ. ಹುಟ್ಟುವಾಗಲೇ ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಬಂದವನು ನಾನಲ್ಲ. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಅನಿರೀಕ್ಷಿತವಾಗಿ ತಿರುವುಗಳ ನಡುವೆ ಬೆಳೆದವನು. ಅಭಿಮಾನೋತ್ಸವದ ಸಾಗರದಲ್ಲಿ ಜನರು ನನ್ನನ್ನು ತೇಲಿಸಿಬಿಟ್ಟಿದ್ದಾರೆ’ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಶನಿವಾರ ಚಿತ್ರದುರ್ಗದಲ್ಲಿ ಏರ್ಪಡಿಸಿದ್ದ ‘ಬಿಎಸ್‍ವೈ ಅಭಿಮಾನೋತ್ಸವ’ದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ‘ತಮ್ಮ ರಾಜಕೀಯ ಹೋರಾಟದ ಜೀವನವನ್ನು ಪಕ್ಷ ಸಂಘಟನೆ ಮಾಡಲು, ರಾಜ್ಯದ ಜನರ ಕಷ್ಟ ತಿಳಿಯಲು ನಿರಂತರ ಪ್ರವಾಸ ಮಾಡಿದ್ದೇನೆ. ನಿರಂತರ ಹೋರಾಟದ ಬದುಕೇ ಶಕ್ತಿ ನೀಡಿದೆ. ಬೂಕನಕೆರೆಯಲ್ಲಿ ಹುಟ್ಟಿ ಶಿಕಾರಿಪುರವನ್ನು ಕರ್ಮಭೂಮಿಯಾಗಿಸಿಕೊಂಡು ರೈತರ, ನೊಂದ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ದುಡಿದೆ ಎಂದು ಸ್ಮರಿಸಿದರು.
ಅಧಿಕಾರದಲ್ಲಿದ್ದಾಗ ತಾಯಂದಿರ, ಸಹೋದರಿಯರ ಕಣ್ಣೀರು ಒರೆಸುವಂತಹ ಯೋಜನೆಗಳನ್ನು ರೂಪಿಸಲು ಶ್ರಮಿಸಿದ್ದೇನೆ. ಭಾಗ್ಯಲಕ್ಷ್ಮಿ ಬಾಂಡ್ ಜಾರಿ ಮಾಡಿದ ಸಾರ್ಥಕ ಭಾವ ನನ್ನದು. ಸಾಧ್ಯವಾದಷ್ಟು ಅನ್ನದಾತರಿಗೆ ನೆರವಾಗುವ ಯೋಜನೆ ತಂದಿದ್ದೇನೆ. ರೈತರ ಬಜೆಟ್ ಅನ್ನು ಎಂದೂ ಮರೆಯುವುದಿಲ್ಲ. ಬಡ್ಡಿ ರಹಿತ ಸಾಲ, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ್ದೇನೆ ಎಂದು ಯಡಿಯೂರಪ್ಪ ನುಡಿದರು.
ಹೋರಾಟದ ಮತ್ತು ಸಂಘಟನೆಯನ್ನು ನಾನು ತಪಸ್ಸು ಎಂದು ಸ್ವೀಕರಿಸಿದವನು. ನನಗೆ ಆರೆಸೆಸ್ಸ್ ಸಂಸ್ಕಾರ ನೀಡಿತು. ಅಧಿಕಾರಕ್ಕಾಗಿ ಎಂದು ಹೋರಾಟ ಮಾಡಲಿಲ್ಲ. ಮುಖ್ಯಮಂತ್ರಿ ಹುದ್ದೆಯನ್ನು ಕನಸಿನಲ್ಲೂ ಕಂಡಿರಲಿಲ್ಲ. ಪುರಸಭೆಯ ಹುದ್ದೆಯಿಂದ, ವಿಪಕ್ಷ ನಾಯಕ, ಮುಂದೆ ಮುಖ್ಯಮಂತ್ರಿಯಾದೆ. ಇದನ್ನೆಲ್ಲ ನಾಡಿನ ಜನರೇ ಬಯಸಿದ್ದರು. ನನ್ನ ರಾಜಕೀಯ ಜೀವನದ ಐವತ್ತು ವರ್ಷಗಳ ಪಯಣ ಸಾರ್ಥಕವಾಗಿದೆ ಎಂದು ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದರು.
ಅಭಿಮಾನೋತ್ಸವಕ್ಕೆ ರಾಜ್ಯದ ವಿವಿಧ ಮಠಾಧೀಶರು, ಸ್ವಾಮೀಜಿಗಳು ಬಂದಿದ್ದಾರೆ. ಇದು ಒಬ್ಬ ವ್ಯಕ್ತಿಯ ಸಂಭ್ರಮ ಅಲ್ಲ. ಶಿಕಾರಿಪುರದಿಂದ ವಿಧಾನಸೌಧದ ಮೆಟ್ಟಿಲುಗಳ ವರೆಗೆ ನನ್ನ ರಾಜಕೀಯ ಪ್ರಯಾಣವನ್ನು ವಿಶ್ರಾಂತಿ ಇಲ್ಲದ ಕಾರ್ಯಕರ್ತರು ರೂಪಿಸಿದರು. ಅವರೇ ನನಗೆ ಶಕ್ತಿ. ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಇದು ನನ್ನ ಜೀವನದ ಪರ್ವದಿನ. ನಿಮ್ಮ ಅಭಿಮಾನದಲ್ಲಿ ತೇಲಿಸಿದ ನನ್ನ ಪ್ರೀತಿಯ ಕರುನಾಡ ಜನತೆಗೆ ಋಣಿಯಾಗಿದ್ದೇನೆ ಎಂದು ಅವರು ಹೇಳಿದರು.
ನಾನು ಇಲ್ಲಿ ಕೇವಲ ರಾಜಕಾರಣಿಯಾಗಿ ನಿಂತಿಲ್ಲ, ಬದಲಿಗೆ ನಿಮ್ಮ ಮನೆ ಮಗನಾಗಿ ನಿಂತಿದ್ದೇನೆ. ವೀರ ಮದಕರಿ ನಾಯಕ, ಒನಕೆ ಓಬವ್ವನ ನಾಡು ಚಿತ್ರದುರ್ಗ, ಶರಣರು ನಡೆದಾಡುವ ತಪೋವನ ಇದು. ಇಲ್ಲಿ ಅಭಿಮಾನೋತ್ಸವ ಆಯೋಜಿಸಿರುವುದು ಅತೀವ ಖುಷಿ ನೀಡಿದೆ ಎಂದ ಅವರು, ನಾಡಿನ ಮೂಲೆ ಮೂಲೆಯಿಂದ ಹರಿದು ಬಂದಿರುವ ಅಭಿಮಾನದ ಸಾಗರದ ಮಧ್ಯೆ ನಿಂತಿರುವ ನನಗೆ ಅಕ್ಷರಶಃ ಮಾತು ಬರುತ್ತಿಲ್ಲ. ಐವತ್ತು ವರ್ಷದ ರಾಜಕೀಯ ಜೀವನವನ್ನು ನಿಮ್ಮೊಂದಿಗೆ ಕಳೆದ ನನ್ನನ್ನು ಈ ಸಾಗರದಲ್ಲಿ ತೋಯಿಸಿ ಸಡಗರ ಪಡುತ್ತಿರುವುದಕ್ಕೆ ನಿಮಗೆ ಋಣಿಯಾಗಿದ್ದೇನೆ ಎಂದು ಅವರು ತಿಳಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಕಾರ್ಯ ಒತ್ತಡ ಇದ್ದರೂ ಇಲ್ಲಿಗೆ ಬಂದಿದ್ದಾರೆ. ದುರ್ಗದ ನೆಲದಲ್ಲಿ ಮದಕರಿ ನಾಯಕನಂತೆ ಅವರು ಕಂಗೊಳಿಸುತ್ತಿದ್ದಾರೆ. ಬಂಗಾಳದ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಪ್ರಧಾನಿ ಮೋದಿ ಅವರೊಂದಿಗೆ ಹೆಗಲು ಕೊಟ್ಟು ಅಮಿತ್ ಶಾ ಕೆಲಸ ಮಾಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ಬಂಗಾಳದಲ್ಲಿ ಜಯ ಸಿಕ್ಕಿದೆ. ಮೋದಿಗೆ ಜನರ ಪರವಾಗಿ ಅಭಿನಂದನೆಗಳು ಎಂದು ಹೇಳಿದರು.
ಈ ವೇಳೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಉಸ್ತುವಾರಿ ರಾಧಾಮೋಹನ್, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೊಷ್, ಸಂಸದರಾದ ಗೋವಿಂದ ಕಾರಜೋಳ, ಬಿ.ವೈ.ರಾಘವೇಂದ್ರ, ಡಾ.ಮಂಜುನಾಥ್, ಮಾಜಿ ಸಿಎಂಗಳಾದ ಜಗದೀಶ್ ಶೆಟ್ಟರ್, ಡಿ.ವಿ. ಸದಾನಂದ ಗೌಡ, ಬಿ.ಶ್ರೀರಾಮುಲು, ಸಿ.ಟಿ.ರವಿ, ರೇಣುಕಾಚಾರ್ಯ ಸೇರಿದಂತೆ ವಿವಿಧ ಮಠಾಧಿಪತಿಗಳು ಹಾಜರಿದ್ದರು.