ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆ: ಸಿಎಂ ಡಿ.ಕೆ.ಶಿವಕುಮಾರ್

Update: 2026-07-25 15:25 IST

ಡಿ.ಕೆ.ಶಿವಕುಮಾರ್

ಚಿತ್ರದುರ್ಗ: ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆ ಆಗಬಹುದು. ಆಗ ಎಲ್ಲಾ ಸಚಿವರುಗಳು ಕೈ ಜೋಡಿಸಿ ಕೆಲಸ ಮಾಡಬೇಕಾಗುತ್ತದೆ. ಒಟ್ಟಾಗಿ ಇಡೀ ರಾಜ್ಯದ ಬರ ಪರಿಸ್ಥಿತಿಯನ್ನು ಅವಲೋಕಿಸಬೇಕು. ಹಳ್ಳಿಗಳಲ್ಲಿ ರೈತರ ಬದುಕಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಇದೇ ನಮ್ಮ ಮುಂದಿರುವ ಹೊಣೆಗಾರಿಕೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಶನಿವಾರ ನಡೆದ ದ ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಸರಕಾರ ಹಾಗೂ ಆಡಳಿತಕ್ಕೆ ಹೊಸ ರೂಪ ನೀಡಲು ನಾವು ಮುಂದಾಗಿದ್ದೇವೆ. ನಾವೆಲ್ಲರೂ ಟೀಮ್ ಕರ್ನಾಟಕವಾಗಿ ಕೆಲಸ ಮಾಡಬೇಕಿದೆ. ಪ್ರಜಾಸೇವಾ ಇಲಾಖೆ ಸ್ಥಾಪನೆ ಹೊಸ ಆಲೋಚನೆ. ಶಾಸಕರು, ಅಧಿಕಾರಿಗಳು ಈ ಇಲಾಖೆ ಮೂಲಕ ಜನರ ಮಧ್ಯೆ ಸರ್ಕಾರ ಇರುವಂತೆ ನೋಡಿಕೊಳ್ಳಬೇಕು. ಜನರ ಸಮಸ್ಯೆಗಳನ್ನು ಗಮನಿಸಿ ಬಗೆಹರಿಸಬೇಕು. ಜನರ ಬಳಿಗೆ ಸರ್ಕಾರವೇ ಹೋಗಬೇಕು ಎಂದು ಹೇಳಿದರು.

ಮೊದಲನೇ ಮತ್ತು ಮೂರನೇ ಶನಿವಾರ ಪ್ರತಿ ವಿಧಾನಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನರ ಸಮಸ್ಯೆ ಆಲಿಸಬೇಕು, ಬಗೆಹರಿಸಬೇಕು. ಇದೇ ಪ್ರಜಾಸೇವಾ ಇಲಾಖೆಯ ಧ್ಯೇಯೋದ್ದೇಶ. ಪ್ರತಿ ಮನೆಗೂ ಸರಕಾರ ತಲುಪುತ್ತಿದೆ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕು. ಜನರು ನೀಡಿದ ಅರ್ಜಿಗೆ ಪರಿಹಾರ ಸಿಗುವ ತನಕ ಅದರ ಬಗ್ಗೆ ಗಮನಹರಿಸಬೇಕು. ಸಚಿವರು ಎಲ್ಲಾ ಕ್ಷೇತ್ರಗಳಿಗೂ ಪ್ರವಾಸ ಮಾಡಬೇಕು. ಯಾವುದೇ ಪಕ್ಷದ ಶಾಸಕರಿದ್ದರೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಹವಾಲು ಸ್ವೀಕರಿಸಿ, ಪರಿಹರಿಸಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.

ಜಿಲ್ಲಾಡಳಿತವು ಗ್ರಾಮೀಣ ಭಾಗದ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಕುಡಿಯುವ ನೀರು ಪೂರೈಕೆಗೆ ಒಂದು ಕೋಟಿ ರೂ.ವರೆಗೆ ಖರ್ಚು ಮಾಡಬಹುದು ಎಂದು ಬೆಳಗಾವಿ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಈ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು. ಹೊಸದಾಗಿ ಬೋರ್ ವೆಲ್ ಕೊರೆದರೆ, ದುರಸ್ತಿಗೊಳಿಸಿದರೆ ಪ್ರತಿಯೊಂದರ ಮಾಹಿತಿ ದಾಖಲಿಸಬೇಕು. ಹೊಸ ಬೋರ್ ವೆಲ್ ಕೊರೆದರೆ ಜಿಪಿಎಸ್ ಮಾಹಿತಿ ದಾಖಲಿಸಬೇಕು. ವಿದ್ಯುತ್ ಸಂಪರ್ಕ ಸೇರಿದಂತೆ ಪ್ರತಿ ತೀರ್ಮಾನದ ಬಗ್ಗೆಯೂ ಮಾಹಿತಿಗಳು ಪಾರದರ್ಶಕವಾಗಿರಬೇಕು ಎಂದು ತಾಕೀತು ಮಾಡಿದ ಮುಖ್ಯಮಂತ್ರಿ, ಜನ ಹಾಗೂ ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಹಾಗೂ ಪಶುಗಳಿಗೆ ಮೇವಿಗೆ ಕೊರತೆ ಆಗಲೇಬಾರದು. ಆರ್ ಓ ಪ್ಲಾಂಟ್ ಗಳ ದುರಸ್ತಿ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

ಈಗಾಗಲೇ ರೈತರಿಗೆ ನಾನು ಮನವಿ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಮುಂದಿನ ಮಳೆ, ಅಣೆಕಟ್ಟು ನೀರು ನೆಚ್ಚಿಕೊಂಡು ಬೆಳೆ ಹಾಕಬಾರದು. ಬೆಳೆ ಹಾಕಿದರೆ ನಷ್ಟಕ್ಕೆ ನೀವೇ ಹೊಣೆಯಾಗಬೇಕಾಗುತ್ತದೆ. ಬೆಳೆ ವಿಮೆ ಕುರಿತು ಅಧಿಕಾರಿಗಳು ಕೆಲಸ ಮಾಡಬೇಕು. ಆಲಮಟ್ಟಿ ಹೊರತಾಗಿ ಬೇರೆ ಯಾವ ಜಲಾಶಯದಲ್ಲೂ ನೀರಿನ ಪರಿಸ್ಥಿತಿ ಉತ್ತಮವಾಗಿಲ್ಲ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಸಾಧ್ಯವಿಲ್ಲ ಎಂದು ಸಮಿತಿ ಮುಂದೆ ಹೇಳಲಾಗಿದೆ. ಅವರಿಗೂ ಪರಿಸ್ಥಿತಿಯ ಬಗ್ಗೆ ಅರಿವಿದೆ ಎಂದರು.

ಪ್ರಧಾನಿ ಮೋದಿ ಅವರು ಸಹ ಎಲ್ ನೀನೋ ಪರಿಣಾಮದ ಬಗ್ಗೆ ಮಾತನಾಡಿದ್ದಾರೆ. ಈ ಎಚ್ಚರಿಕೆಯನ್ನು ನಾವು ಕಡೆಗಣಿಸಬಾರದು. ನಾನು ಸಹ ಪ್ರಧಾನಿಯವರಿಗೆ ಬರ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದೇನೆ. ಡಿಸಿಎಂ ಅವರೂ ಸಹ ಬರದ ಬಗ್ಗೆ ವಸ್ತುಸ್ಥಿತಿ ತಿಳಿಸಲು ಪ್ರಧಾನಿಯವರ ಬಳಿಗೆ ಶೀಘ್ರ ನಿಯೋಗ ಕಳುಹಿಸಲಿದ್ದಾರೆ ಎಂದು ಸಿಎಂ ತಿಳಿಸಿದರು.

ವಿಬಿಜಿ ರಾಮ್ ಜಿ ಹೆಸರು ಬದಲಾವಣೆ ನಮ್ಮ ಮುಂದಿದೆ. ಹೊಸ ರೂಪ ನೀಡಲು ಮುಂದಾಗಿದ್ದೇವೆ. ಇದಕ್ಕೂ ರೂಪುರೇಷೆ ತಯಾರಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರವೇ ಶೇ40 ರಷ್ಟು ಹಣ ನೀಡಬೇಕಾಗಿದೆ ಎಂದು ಅವರು ಹೇಳಿದರು.,

ಆಗಸ್ಟ್ ಎರಡನೇ ವಾರ ಅಥವಾ 6 ನೇ ತಾರೀಕು ವಿಧಾನಸಭೆ ಅಧಿವೇಶನ ನಡೆಯಬಹುದು. ಎಸ್ ಐಆರ್ ನಿಂದ ಅಧಿವೇಶನ ಮುಂದೂಡುವ ಪರಿಸ್ಥಿತಿ ಎದುರಾಯಿತು. ಇನ್ನಷ್ಟು ಮುಂದೂಡಿಕೆ ಕಷ್ಟವಾಗಬಹುದು ಎಂದು ಸಿಎಂ ತಿಳಿಸಿದರು.

ಎಲ್ಲಾ ಶಾಸಕರು ನೇರವಾಗಿ ನನ್ನ ಬಳಿಯೇ ಯಾವುದೇ ಸಮಸ್ಯೆ ಇದ್ದರೂ ಹೇಳಬಹುದು. ಅದನ್ನು ಬಗೆಹರಿಸಲು ಆದಷ್ಟು ಪ್ರಯತ್ನ ಮಾಡುತ್ತೇನೆ. ಬೆಂಗಳೂರಿನಲ್ಲಿ ಸಭೆ ನಡೆಸುವ ಬದಲು ಮೊದಲನೇ ಸಭೆಯನ್ನು ಬಸವಣ್ಣನವರ ನಾಡಿನಲ್ಲಿ ನಡೆಸಲಾಯಿತು. ಕಲಬುರ್ಗಿ ಹಾಗೂ ಬೆಳಗಾವಿಯಲ್ಲಿ ಸಭೆ ನಡೆಸಿ ಹಲವಾರು ಗಂಟೆಗಳ ಕಾಲ ಶಾಸಕರ ಜೊತೆ ಚರ್ಚೆ ನಡೆಸಿ ಬರ ನಿರ್ವಹಣೆ, ಕುಡಿಯುವ ನೀರಿನ ಬಗ್ಗೆ ಚರ್ಚೆ ನಡೆಸಲಾಯಿತು. ಚಿತ್ರದುರ್ಗದ ಸಭೆಯೂ ಸಹ ಹೆಚ್ಚು ಫಲಪ್ರದವಾಗಬೇಕು ಎಂಬುದು ನನ್ನ ಅಭಿಲಾಷೆ ಎಂದು ಮುಖ್ಯಮಂತ್ರಿ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News