×
Ad

ಹಳ್ಳಿ ಪ್ರೇಮ ಚಂದಾನಮ್ಮ...

Update: 2026-05-16 14:57 IST

ಚಿತ್ರ: ಲೋ.. ನವೀನ

ನಿರ್ದೇಶಕ: ಧನುರ್ಧಾರಿ ಪವನ್

ನಿರ್ಮಾಪಕಿ: ಕೀರ್ತಿ ಸ್ವಾಮಿ

ತಾರಾಗಣ: ನವೀನ್ ಸಜ್ಜು, ವರ್ಷಾ ಗಿರಿಧರ್ ಮೊದಲಾದವರು.

ನವೀನ ಚಿತ್ರದ ಕಥಾನಾಯಕನ ಹೆಸರು. ಸ್ನೇಹಿತರು ಮಾತ್ರವಲ್ಲ ಆತನ ತಾಯಿ, ಮಾವ, ಮಾವನ ಮಗಳು ಎಲ್ಲರೂ ‘ಲೋ ನವೀನ’ ಎಂದೇ ಕರೆಯುತ್ತಾರೆ. ಆದರೆ ಅತ್ತೆ ಮಗಳು ಆಶಾ ಲೋ.. ಎಂದಾಗ ಅದರಲ್ಲಿ ನವೀನನಿಗೆ ಎಲ್ಲಿಲ್ಲದ ಪ್ರೀತಿ ಕಾಣಿಸುತ್ತದೆ. ಅಂಥ ಆಶಾಳಿಗೆ ಯಾರದೋ ಜೋಡಿ ನಿಶ್ಚಿತಾರ್ಥದ ತಯಾರಿ. ಅದರೆ ಆಶಾ ರಾತ್ರೋರಾತ್ರಿ ನವೀನನ ಜೊತೆ ಹೊರಟು ನಿಲ್ಲಲು ಸಿದ್ಧ. ಹಳ್ಳಿಯಲ್ಲಿರುವ ನವೀನನ ಆಪ್ತ ಮಿತ್ರರು ಇನ್ನಿಲ್ಲದಂತೆ ಸಹಾಯಕ್ಕೆ ಸಜ್ಜು. ಆದರೆ ಮುಂದೇನಾಗುತ್ತದೆ ಎನ್ನುವುದೇ ಕಥೆಯ ಸಾರ.

ಸ್ನೇಹಿತರ ಸಹಾಯದೊಡನೆ ಹುಡುಗ-ಹುಡುಗಿ ಓಡಿ ಹೋಗುವ ದೃಶ್ಯಗಳು ಸಾಕಷ್ಟು ಸಿನೆಮಾಗಳಲ್ಲಿವೆ. ಆದರೆ ನಿಮಗೆ ನೆನಪಾಗುವ ಆ ಎಲ್ಲ ಚಿತ್ರಗಳಿಗಿಂತ ಇದು ವಿಭಿನ್ನ. ಅದು ಕಥೆಯ ವಿಚಾರದಲ್ಲಿ ಮಾತ್ರವಲ್ಲ, ದೃಶ್ಯವನ್ನು ಕಟ್ಟಿರುವ ರೀತಿಯಲ್ಲಿಯೂ ಹೌದು. ಮದುವೆಗೆಂದು ಇಲ್ಲದ ಹಣ ಹೊಂದಿಸುವುದು ಮತ್ತು ರಾತ್ರೋ ರಾತ್ರಿ ಪಲಾಯನಗೈಯುವುದು ಎನ್ನುವಲ್ಲಿ ಗೆಳೆಯರ ಕಾಳಜಿ, ಯುವತ್ವದ ಭಂಡತನ, ಪರಿಸ್ಥಿತಿಯ ಆತಂಕ ಎಲ್ಲವನ್ನೂ ತೋರಿಸಲಾಗಿದೆ. ಇವೆಲ್ಲದರ ಮಧ್ಯೆ ಸ್ನೇಹಿತರ ಪೀಕಲಾಟ ಪ್ರೇಕ್ಷಕರನ್ನು ಮೈಮರೆಸಿ ನಗುವಂತೆ ಮಾಡುತ್ತದೆ. ಅಲ್ಲಿಗೆ ನಿರ್ದೇಶಕ ಧನುರ್ಧಾರಿ ಪವನ್ ಎಲ್ಲ ರೀತಿಯಿಂದಲೂ ತಮ್ಮ ಗೆಲುವು ದಾಖಲಿಸಿದ್ದಾರೆ ಎನ್ನಬಹುದು.

ಅರೆಕ್ಷಣ ಪರದೆಯಿಂದ ಕಣ್ಣು ತಪ್ಪಿದರೆ ಕಥೆ ಎಷ್ಟು ವರ್ಷ ಹಿಂದೆ ಅಥವಾ ಮುಂದೆ ಚಲಿಸಿದೆ ಎಂದು ಬರೆದಿರುವುದನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆ ಇದೆ! ಕೆಲವರಿಗಾದರೂ ಒಟ್ಟಾರೆ ಕಥೆಗೆ ಪೂರ್ಣರೂಪ ಸಿಕ್ಕಿಲ್ಲ ಎನ್ನುವ ಭಾವನೆ ಉಂಟಾಗಬಹುದು. ಆದರೆ ಇಡೀ ಕಥೆಗೆ ನವೀನನ ಪ್ರೇಮ ಪ್ರಸಂಗಗಳೇ ಕೇಂದ್ರ ಬಿಂದು. ಆ ದೃಷ್ಟಿಯಲ್ಲಿದ್ದರೆ ಎಲ್ಲವೂ ಅರ್ಥವತ್ತಾಗಿದೆ ಎಂದು ಅರಿವಾದೀತು. ಇವೆಲ್ಲದರ ಜತೆಗೆ ಪ್ರೇಮ ಭಗ್ನವಾಗಿದೆ ಎಂದೋ, ಹುಡುಗಿ ಸಿಗುತ್ತಿಲ್ಲ ಎಂದೋ ತಲೆ ಕೆಡಿಸಿಕೊಂಡವರಿಗೆ ಸಂತೃಪ್ತರಾಗಬಲ್ಲ ಸನ್ನಿವೇಶವೂ ಇಲ್ಲಿದೆ.

ನವೀನನಾಗಿ ನವೀನ್ ಸಜ್ಜು ನಟಿಸಿದ್ದಾರೆ. ಅದನ್ನು ನಟನೆ ಎನ್ನುವುದಕ್ಕಿಂತ ಮಂಡ್ಯದ ಹಳ್ಳಿ ಹುಡುಗನಾಗಿ ಜೀವಿಸಿದ್ದಾರೆಂದೇ ಹೇಳಬಹುದು. ನಟರಾಗಿ ಮಾತ್ರವಲ್ಲ ಸಂಗೀತ ನಿರ್ದೇಶಕರಾಗಿಯೂ ಗೆದ್ದಿದ್ದಾರೆ. ಚಿತ್ರ ಶುರುವಾದ ಮೊದಲ ಕಾಲು ಘಂಟೆಯಲ್ಲೇ ಮೂರು ಹಾಡುಗಳು ಬಂದೆರಗುತ್ತವೆ! ಆದರೆ ಎಲ್ಲೂ ಪರದೆ ಬಿಟ್ಟು ಮೊಬೈಲ್ ನೋಡಬೇಕು ಅನಿಸುವುದಿಲ್ಲ. ಮೊದಲಾರ್ಧವಂತೂ ಐದೇ ನಿಮಿಷದಲ್ಲಿ ಮುಗಿದಂತೆ ಭಾಸವಾಗುತ್ತದೆ. ಮಧ್ಯಂತರದ ಬಳಿಕ ಚಿತ್ರಕಥೆಯ ವೇಗ ತಗ್ಗಿದಂತೆ ಕಂಡರೂ ಆಸ್ವಾದನೆಗೆ ಕೊಂಚವೂ ಭಂಗವಿಲ್ಲ.

ನವೀನನ ಅತ್ತೆ ಮಗಳಾಗಿ ನವನಟಿ ವರ್ಷಾ ಗಿರಿಧರ್ ಮನಸೆಳೆಯುತ್ತಾರೆ. ಈ ಜೋಡಿಗೆ ಮಂಡ್ಯದ ಹಳ್ಳಿ ಮತ್ತು ಬೆಂಗಳೂರು ನಗರದ ಲುಕ್‌ಗಳಿವೆ. ಎರಡರಲ್ಲೂ ಸಹಜವಾಗಿ ಹೊಂದುವ ವಸ್ತ್ರಶೈಲಿಯಿದೆ. ಸ್ನೇಹಿತರ ಪಂಚೆ, ಅವ್ವಂದಿರ ರವಿಕೆ, ಹೋಟೆಲ್ ನೌಕರರ ಸಮವಸ್ತ್ರ ಸೇರಿದಂತೆ ಪ್ರತಿಯೊಬ್ಬರಲ್ಲೂ ವಸ್ತ್ರ ವಿನ್ಯಾಸಕರ ಮೇಲ್ನೋಟದ ಇರುವಿಕೆ ಸಾಬೀತಾಗುತ್ತದೆ. ಅಪೂರ್ವ ಶ್ರೀ, ಪ್ರಕಾಶ್ ತೂಮಿನಾಡ್ ಇಂಥ ಅನುಭವಿಗಳ ನಡುವೆ ರೇಶ್ಮಾ ವಿ. ಗೌಡ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡವರಿಂದಲೂ ನೈಜ ನಟನೆ ಹೊರತೆಗೆಯಲಾಗಿದೆ.

ಸತೀಶ್ ಸಾಕಾರ್ ಶ್ರೇಷ್ಠ ಛಾಯಾಗ್ರಹಣ ಮತ್ತು ವಿಜಯ್ ಎಂ. ಕುಮಾರ್ ಸಂಕಲನ ಚಿತ್ರದ ಗುಣಮಟ್ಟವನ್ನು ಹೆಚ್ಚಿಸಿದೆ. ಈ ಮಟ್ಟಕ್ಕೆ ಮನರಂಜಿಸುವ ಸಿನೆಮಾ ಈ ಹಿಂದೆ ಪರಭಾಷೆಗಳಲ್ಲಿ ಬಂದಿರಬಹುದು. ರಿಮೇಕ್ ಆಗಿ ಕನ್ನಡದಲ್ಲೂ ಬಂದಿರಬಹುದು. ಆದರೆ ತೀರಾ ಅಪರೂಪ ಎನ್ನುವಂತೆ ಹೊಸಬರ ತಂಡ ನಮ್ಮ ಸೊಗಡಿನ ಅದ್ಭುತ ಸೃಷ್ಟಿಸಿದೆ.

ಹಳ್ಳಿ ಸಿನೆಮಾ ಎಂದೊಡನೆ ಸಹಜತೆ ಹೆಸರಲ್ಲಿ ಅಶ್ಲೀಲ ಸಂಭಾಷಣೆ, ಮನರಂಜನೆ ಎಂದು ಐಟಮ್ ಡಾನ್ಸ್, ಪ್ರೇಕ್ಷಕ ಬಯಸುತ್ತಾನೆ ಎಂದು ಅಸಂಭಾವ್ಯ ಸಾಹಸಗಳನ್ನು ತುರುಕುವ ದೊಡ್ಡ ದೊಡ್ಡ ನಿರ್ದೇಶಕರಿದ್ದಾರೆ. ಅವರೆಲ್ಲರೂ ಈ ಪರಿಶುದ್ಧ ಮನರಂಜನಾತ್ಮಕ ಹಾಸ್ಯ ಚಿತ್ರದ ನಿರ್ದೇಶಕರಿಂದ ಕಲಿಯಬೇಕಿದೆ. ಮಾತ್ರವಲ್ಲ ವಿದೇಶದಲ್ಲಿದ್ದರೂ ಇಂಥದೊಂದು ಸಭ್ಯ ಚಿತ್ರವೇ ಬೇಕೆಂದು ನಿರ್ಮಾಣಕ್ಕೆ ಮುಂದಾದ ಮಂಡ್ಯದ ಕೀರ್ತಿ ಸ್ವಾಮಿ ಕೂಡ ಪ್ರಶಂಸಾರ್ಹರು. ಮನೆಮಂದಿಯ ಮನರಂಜನೆಗಾಗಿ ಈ ಸಿನೆಮಾವನ್ನು ಧೈರ್ಯದಿಂದ ಆಯ್ಕೆ ಮಾಡಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಶಿಕರ ಪಾತೂರು

contributor

Similar News