ಪುತ್ತೂರು: ಖ್ಯಾತ ಕಂಬಳ ವೀಕ್ಷಕ ವಿವರಣೆಗಾರ ನಿರಂಜನ್ ರೈ ನಿಧನ
ಪುತ್ತೂರು, ಜು.8: ಕಾಂಗ್ರೆಸ್ ಮುಖಂಡ, ಕಂಬಳ ಕ್ಷೇತ್ರದ ಸಕ್ರಿಯ ಸಂಘಟಕರಾಗಿದ್ದ ನಿರಂಜನ ರೈ (60) ಮಠಂತಬೆಟ್ಟು ಬುಧವಾರ ತಾಲೂಕು ಕಚೇರಿಯಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆಯುತ್ತಿದ್ದ ಭೂನ್ಯಾಯ ಮಂಡಳಿ ಕೋರ್ಟ್ ಕಲಾಪದಲ್ಲಿ ಭಾಗವಹಿಸಿದ್ದ ಅವರು ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಉಪ್ಪಿನಂಗಡಿ ಸಮೀಪದ ಮಠಂತಬೆಟ್ಟು ನಿವಾಸಿಯಾಗಿದ್ದ ನಿರಂಜನ ರೈಯವರು ಕೋಡಿಂಬಾಡಿ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ, ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪುತ್ತೂರು ಭೂನ್ಯಾಯ ಮಂಡಳಿ ಸದಸ್ಯರಾಗಿದ್ದ ಅವರು ಬನ್ನೂರು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ, ಬಂಟರ ಸಂಘದಲ್ಲಿ ಸಕ್ರಿಯವಾಗಿದ್ದರು.
ಕಂಬಳ ಸ್ಪರ್ಧೆಗಳಲ್ಲಿ ವೀಕ್ಷಕ ವಿವರಣೆಗಾರರಾಗಿ ಪರಿಚಿತರಾಗಿದ್ದರು. ಕಂಬಳದ ಕುರಿತು ಹೊಂದಿದ್ದ ಅಪಾರ ಜ್ಞಾನ, ಸ್ಪಷ್ಟ ನಿರೂಪಣೆ ಹಾಗೂ ವಿಶಿಷ್ಟ ಶೈಲಿಯಿಂದ ಕಂಬಳ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.