×
Ad

ದಾರುಲ್ ಖಝಾದ ಮೂಲಕವೇ ವಿವಾದ ಬಗೆಹರಿಸಿ; ಅನಗತ್ಯ ನ್ಯಾಯಾಂಗ ಹಸ್ತಕ್ಷೇಪ ತಪ್ಪಿಸಿ: AIMPLB ಪ್ರಧಾನ ಕಾರ್ಯದರ್ಶಿ ಮೌಲಾನಾ ಫಜ್ಲುರ್ ರಹೀಮ್ ಮುಜದ್ದಿದಿ

Update: 2026-07-07 23:53 IST

ಮಂಗಳೂರು: ಕುಟುಂಬ ಮತ್ತು ವೈಯಕ್ತಿಕ ವಿವಾದಗಳನ್ನು ಸಾಧ್ಯವಾದಷ್ಟು ದಾರುಲ್ ಖಝಾದ ಮೂಲಕವೇ ಬಗೆಹರಿಸಬೇಕು. ಸಿವಿಲ್ ನ್ಯಾಯಾಲಯಗಳಿಗೆ ಹೋಗುವುದನ್ನು ತಪ್ಪಿಸಿದರೆ, ಶರಿಯಾ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಅನಗತ್ಯ ನ್ಯಾಯಾಂಗ ಹಸ್ತಕ್ಷೇಪವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಪ್ರಧಾನ ಕಾರ್ಯದರ್ಶಿ ಮೌಲಾನಾ ಫಜ್ಲುರ್ ರಹೀಮ್ ಮುಜದ್ದಿದಿ ಹೇಳಿದರು.

ನಗರದ ವಾಸ್ ಲೇನ್ ನ HIF ಸಭಾಂಗಣದಲ್ಲಿ ಮಂಗಳವಾರ ಸಂಜೆ ಇಕ್ರಾ ಅರೇಬಿಕ್ ಸ್ಕೂಲ್ ಹಾಗೂ HIF ಇಂಡಿಯಾ ಜಂಟಿಯಾಗಿ ಆಯೋಜಿಸಿದ್ದ ಪ್ರಚಲಿತ ವಿದ್ಯಮಾನಗಳು ಮತ್ತು ನಮ್ಮ ಜವಾಬ್ದಾರಿಗಳುʼ ಎಂಬ ವಿಷಯ ಕುರಿತ ಮುಸ್ಲಿಂ ಚಿಂತಕರ ಸಭೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಉದ್ದೇಶಗಳು ಹಾಗೂ ಕಾರ್ಯಚಟುವಟಿಕೆಗಳನ್ನು ವಿವರಿಸಿದ ಅವರು, ಭಾರತದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿನ ರಕ್ಷಣೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಮುಸ್ಲಿಮರು ತಮ್ಮ ಕುಟುಂಬಗಳಲ್ಲಿ ಇಸ್ಲಾಮಿಕ್ ಮೌಲ್ಯಗಳನ್ನು ಬಲಪಡಿಸಿ, ಅವುಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುವುದು ಅತ್ಯಗತ್ಯ. ಜತೆಗೆ, ಸಮುದಾಯವು ಸಮಕಾಲೀನ ಸವಾಲುಗಳಿಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ಬದಲು ಏಕತೆ, ಸ್ಪಷ್ಟ ದೃಷ್ಟಿಕೋನ ಮತ್ತು ದೀರ್ಘಕಾಲೀನ ಕಾರ್ಯತಂತ್ರ ದೊಂದಿಗೆ ಎದುರಿಸಬೇಕು ಎಂದು ಅವರು ಹೇಳಿದರು.

ಕುಟುಂಬ ಹಾಗೂ ವೈಯಕ್ತಿಕ ವಿವಾದಗಳನ್ನು ದಾರುಲ್ ಖಝಾದ ಮೂಲಕ ಇತ್ಯರ್ಥಪಡಿಸುವ ಸಂಸ್ಕೃತಿ ಬೆಳೆಸಿಕೊಳ್ಳುವಂತೆ ಸಮುದಾಯಕ್ಕೆ ಮನವಿ ಮಾಡಿದ ಅವರು, ಹೀಗೆ ಮಾಡುವುದರಿಂದ ಶರಿಯಾ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನಿಗೆ ಸಂಬಂಧಿಸಿದ ವಿಚಾರಗಳಲ್ಲಿ ಅನಗತ್ಯ ನ್ಯಾಯಾಂಗ ಹಸ್ತಕ್ಷೇಪವನ್ನು ತಡೆಯಲು ನೆರವಾಗುತ್ತದೆ ಎಂದು ಹೇಳಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಮಂಗಳೂರಿನ ಶಾಂತಿ ಪ್ರಕಾಶನದ ನಿರ್ದೇಶಕ ಮುಹಮ್ಮದ್ ಕುಂಞಿ, ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಹೆಚ್ಚುತ್ತಿರುವ ಸವಾಲುಗಳ ಕುರಿತು ಮಾತನಾಡಿದರು.

ಪೌರತ್ವ ತಿದ್ದುಪಡಿ ಕಾಯ್ದೆ (CAA), ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮುಂತಾದ ವಿಷಯಗಳನ್ನು ಉಲ್ಲೇಖಿಸಿದ ಅವರು, ಇವು ಮುಸ್ಲಿಮರ ಅಸ್ತಿತ್ವಕ್ಕೆ ಸವಾಲು ಒಡ್ಡುತ್ತಿವೆ ಎಂದು ಹೇಳಿದರು. ಇತಿಹಾಸದುದ್ದಕ್ಕೂ ಇಸ್ಲಾಂ ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತ ಬಂದಿದೆ. ಹಲವು ಪ್ರಬಲ ರಾಷ್ಟ್ರಗಳು ಮತ್ತು ಶಕ್ತಿಗಳು ಇಸ್ಲಾಂ ಹಾಗೂ ಅದರ ವ್ಯವಸ್ಥೆಯನ್ನು ತಮ್ಮ ಪಾಲಿಗೆ ಅಪಾಯಕಾರಿಯೆಂದು ಕಂಡಿವೆ ಎಂದು ಅವರು ಹೇಳಿದರು.

ಇರಾನ್ ಮತ್ತು ಫೆಲೆಸ್ತೀನ್ ನಲ್ಲಿನ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ಅಲ್ಲಿನ ಪರಿಸ್ಥಿತಿಯ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಇವೆ ಎಂದು ಆರೋಪಿಸಿದರು. ಇಂತಹ ಸಂದರ್ಭಗಳಲ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ಬದಲು, ಸ್ಪಷ್ಟ ದೃಷ್ಟಿಕೋನ ಮತ್ತು ದೀರ್ಘಕಾಲೀನ ಕಾರ್ಯತಂತ್ರದೊಂದಿಗೆ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಸಮುದಾಯಕ್ಕೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಕ್ರಾ ಅರೇಬಿಕ್ ಸ್ಕೂಲ್ ನ ಪ್ರಾಂಶುಪಾಲ ಮೌಲಾನಾ ಸಾಲಿಮ್ ಖಲೀಫಾ ನದ್ವಿ ವಹಿಸಿದ್ದರು. ಅಧ್ಯಕ್ಷೀಯ ಭಾಷಣದಲ್ಲಿ ಅವರು, ಭಾರತದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿನ ರಕ್ಷಣೆಗಾಗಿ ಸಂಘಟಿತವಾಗಿ ಕಾರ್ಯನಿರ್ವಹಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಸಮುದಾಯದ ಪ್ರಮುಖ ವಿದ್ವಾಂಸರು, ಧಾರ್ಮಿಕ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.



 


 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News